DAKSHINA KANNADA
ಕೆದಂಬಾಡಿ ರಾಮಯ್ಯ ಗೌಡ ಶೌರ್ಯ ಪ್ರಶಸ್ತಿಗೆ ಏಕನಾಥ ಶೆಟ್ಟಿ ಆಯ್ಕೆ

ಮಂಗಳೂರು, ಎಪ್ರಿಲ್ 03: ‘ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ’ಗೆ ತುಳುನಾಡಿನ ಯೋಧ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಎಂ.ಬಿ.ಕಿರಣ್ ಬುಡ್ಲೆಗುತ್ತು, ‘ಕ್ರಿ.ಶ 1834ರಿಂದ 1837ರವರೆಗೆ ನಡೆದ ಅಮರ ಸ್ವಾತಂತ್ರ್ಯ ಹೋರಾಟದಲ್ಲಿ ತುಳುನಾಡಿನ ನೇಕ ರೈತರು ಬಲಿದಾನ ಮಾಡಿದ್ದಾರೆ. ಹೋರಾಟಗಾರರು ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದಲ್ಲಿ ನಗರದ ಬಾವುಟಗುಡ್ಡೆಯಲ್ಲಿ 1837ರ ಏ. 5ರಂದು ವಿಜಯ ಪತಾಕೆ ಹಾರಿಸಿ ಹಾರಿಸಿದ್ದರು. ಇದರ ಸ್ಮರಣಾರ್ಥ ಕಳೆದ ವರ್ಷ ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅವರ ಹೆಸರಿನಲ್ಲಿ ಈ ವರ್ಷದಿಂದ ಶೌರ್ಯ ಪ್ರಶಸ್ತಿಯನ್ನು ಆರಂಭಿಸಿದ್ದೇವೆ’ ಎಂದರು.

‘ಭಾರತೀಯ ಭೂಸೇನೆ ಮತ್ತು ವಾಯು ಸೇನೆಗಳಲ್ಲಿ ಕರ್ತವ್ಯ ನಿರ್ವಹಿಸಿ ದೇಶ ಸೇವೆ ಮಾಡಿರುವ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡರು ನಿಗೂಢವಾಗಿ ಕಣ್ಮರೆಯಾಗಿದ್ದರು. 2016ರಲ್ಲಿ ಅಂಡಮಾನ್ ನಿಕೋಬಾರ್‌ನ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿದ್ದ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ಆ ವಿಮಾನದಲ್ಲಿ ಸುಬೇದಾರ್ ಏಕನಾಥ ಶೆಟ್ಟಿ ಇದ್ದರು. ಇಬ್ಬರ ಅಂತ್ಯದಲ್ಲೂ ಸಾಮ್ಯತೆ ಇದೆ’ ಎಂದರು.
‘ಸೇಂಟ್ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ಇದೇ 5ರಂದು ಬೆಳಿಗ್ಗೆ 10.30ರಿಂದ ಅಮರ ಸುಳ್ಯ ಸಂಸ್ಮರಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಏಕನಾಥ ಶೆಟ್ಟಿ ಕುಟುಂಬಸ್ಥರಿಗೆ ₹ 50 ಸಾವಿರ ನಗದನ್ನು ಒಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಪಿ.ಎಚ್.ಆನಂದ್ ನೆರಿಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಪ್ರಧಾನ ಸಂಚಾಲಕ ಭಾಸ್ಕರ ದೇವಸ್ಯ ಹಾಗೂ ಖಜಾಂಚಿ ಶಿವರಾಮ ಗೌಡ ನಿನ್ನಿಕಲ್ ಇದ್ದರು.