ಮುಂಬೈ, ಫೆಬ್ರವರಿ 26: ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧದ ಬ್ಯಾಂಕ್ ಸಾಲದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮುಂಬೈನಲ್ಲಿರುವ ಅಬೋಡ್ ನಿವಾಸವನ್ನು ಇಡಿ ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ನಿವಾಸ ಬರೋಬ್ಬರಿ 3,716 ಕೋಟಿ ರೂ. ಮೌಲ್ಯದ್ದು ಆಗಿದೆ. ಮುಂಬೈನ ಪಾಲಿಹಿಲ್ ಪ್ರದೇಶದಲ್ಲಿರುವ 17 ಅಂತಸ್ತಿನ, 66 ಮೀ.ಎತ್ತರದ ಐಷಾರಾಮಿ ಆಸ್ತಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಜಪ್ತಿ ಮಾಡಲಾದ ಒಟ್ಟು ಆಸ್ತಿಯ ಮೌಲ್ಯ 15,700 ಕೋಟಿ ರೂಪಾಯಿಗೆ ತಲುಪಿದೆ ಅನ್ನುವ ಮಾಹಿತಿ ಇದೆ.
ಇದು ಈ ಜಪ್ತಿ ಆರ್ಕಾಮ್ ನಿಂದ ಹಣಕಾಸು ಅಕ್ರಮಗಳು ಮತ್ತು ಸಾಲದ ಹಣದ ದುರ್ಬಳಕೆ ಆರೋಪಗಳ ಕುರಿತು ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿದೆ. ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿAದ ವಂಚನೆ, ಲಂಚ ಮತ್ತು ಬ್ಯಾಂಕ್ ಸಾಲಗಳ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಎರಡು ಎಫ್ಐಆರ್ಗಳ ಆಧಾರದಲ್ಲಿ ಇಡಿ ತನಿಖೆ ನಡೆಸುತ್ತಿದೆ.
ಕೆಲವು ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರನ್ನು ಇಡಿ ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಅವರನ್ನು ಈ ಹಿಂದೆ ಆಗಸ್ಟ್ 2025 ರಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಪಿಎಂಎಲ್ಎ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿತ್ತು. ಈಗ ಮತ್ತೊಮ್ಮೆ ಅನಿಲ್ ಅಂಬಾನಿ ವಿಚಾರಣೆಗೆ ಒಳಪಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.