LATEST NEWS
ಶರತ್ ಕುಮಾರ್ ನಾಪತ್ತೆ ಪ್ರಕರಣ ಚುರುಕುಗೊಳಿಸಲು ಡಿವೈಎಫ್ ಐ ಒತ್ತಾಯ

ಶರತ್ ಕುಮಾರ್ ನಾಪತ್ತೆ ಪ್ರಕರಣ ಚುರುಕುಗೊಳಿಸಲು ಡಿವೈಎಫ್ ಐ ಒತ್ತಾಯ
ಮಂಗಳೂರು ಅಗಸ್ಟ್ 28: ಸಂಶಯಾಸ್ಪದವಾಗಿ ನಾಪತ್ತೆಗೊಂಡಿರುವ ಶರತ್ ಕುಮಾರ್ ಪ್ರಕರಣವನ್ನು ಚುರುಕುಗೊಳಿಸಿ ಪತ್ತೆಹಚ್ಚಲು ಡಿವೈಎಫ್ಐ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.
ಪೊಲೀಸ್ ಆಯುಕ್ತರನ್ನು ಭೇಟಿಮಾಡಿ ಡಿವೈಎಫ್ ಐ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ ಮಂಗಳೂರು ನಗರ ಪ್ರದೇಶದ ಪಡೀಲ್ ನಿವಾಸಿಯಾಗಿರುವ 28 ವರ್ಷದ ಶರತ್ ಕುಮಾರ್ ಕಳೆದ ಒಂದು ವರುಷದ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದು. ಈ ಬಗ್ಗೆ ಆತನ ತಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಆದರೆ ಈ ವರೆಗೂ ಶರತ್ ಕುಮಾರ್ ನನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸರಿಂದ ಸಾಧ್ಯವಾಗಲಿಲ್ಲ. ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ಹಿರಿಯ ಮಗನ ದಿಢೀರ್ ಸಂಶಯಾಸ್ಪದವಾಗಿ ನಾಪತ್ತೆಯಾಗಿರುವುದರಿಂದ ಹೆತ್ತವರು ಕಂಗಾಲಾಗಿದ್ದಾರೆ.

ಇನ್ನು ನಾಪತ್ತೆಗೊಂಡ ಶರತ್ ನನ್ನು ಪತ್ತೆ ಹಚ್ಚಿಕೊಡಬೇಕಾಗಿದ್ದ ಸ್ಥಳೀಯ ಪೊಲೀಸರು ಪ್ರಕರಣವನ್ನು ಕೈ ಚೆಲ್ಲಿದ್ದಾರೆ, ಪ್ರಕರಣದ ತನಿಖೆ ನಿಧಾನಗತಿಯಲ್ಲಿದೆ. ಹೆತ್ತವರು ಮಗನ ನಾಪತ್ತೆಯ ಹಿಂದೆ ಆತನ ಗೆಳೆಯರುಗಳ ಕೈವಾಡವಿರಬಹುದೆಂಬ ಸಂಶಯ ವ್ಯಕ್ತಪಡಿಸಿರುವುದರಿಂದ ಮೇಲ್ನೋಟಕ್ಕೆ ಒಂದಿಬ್ಬರನ್ನು ತನಿಖೆಗೊಳಪಡಿಸಿ ಬಿಟ್ಟಿರುತ್ತಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸಂಶಯಾಸ್ಪದವಾಗಿ ನಾಪತ್ತೆಗೊಂಡಿರುವ ಶರತ್ ಕುಮಾರನ ಪ್ರಕರಣವನ್ನು ಇನ್ನಷ್ಟು ಚುರುಕುಗೊಳಿಸಬೇಕು ಹಾಗೂ ಹೆತ್ತವರು ಅನುಮಾನ ವ್ಯಕ್ತಪಡಿಸಿರುವ ಆತನ ಗೆಳೆಯರುಗಳನ್ನು ಮತ್ತೊಮ್ಮೆ ತನಿಖೆಗೊಳಪಡಿಸಬೇಕು ಮತ್ತು ಮಗನನ್ನು ಕೂಡಲೇ ಪತ್ತೆಹಚ್ಚಿಕೊಡಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.