LATEST NEWS
ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆಯಲ್ಲೇ ಶವ ಸುಟ್ಟು ಪ್ರತಿಭಟನೆ

ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆಯಲ್ಲೇ ಶವ ಸುಟ್ಟು ಪ್ರತಿಭಟನೆ
ಸುರತ್ಕಲ್ ಸೆಪ್ಟೆಂಬರ್ 5: ಸುರತ್ಕಲ್-ಕಾನ-ಬಾಳ- MRPL ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಆರಂಭಿಸಲು ಒತ್ತಾಯಿಸಿ ಹಾಗೂ ರಸ್ತೆಯಲ್ಲಿ ಗುಂಡಿಗಳನ್ನು ಕೂಡಲೇ ಮುಚ್ಚಬೇಕೆಂದು ಆಗ್ರಹಿಸಿ ಡಿವೈಎಫ್ಐ ವತಿಯಿಂದ ಇದು ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್ಐ ಸಿಐಟಿಯು ನೇತೃತ್ವದಲ್ಲಿ ಬಾಳ ಬಸ್ ನಿಲ್ದಾಣದ ಬಳಿಯಿಂದ ಕಾನ ಕಟ್ಲದವರಗೆ ನಗರಾಡಳಿತದ ಅಣಕು ಶವ ಯಾತ್ರೆ ನಡೆಸಿದ ಪ್ರತಿಭಟನಾಕಾರರು, ನಂತರ ರಸ್ತೆ ಗುಂಡಿಯಲ್ಲೇ ಶವ ಸುಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂಧರ್ಭ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಜನರ ಹೋರಾಟ ಮತ್ತು ಒತ್ತಾಯದ ಪ್ರತಿಫಲವಾಗಿ 58 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿತ್ತು.
ಆದರೆ ನಗರಪಾಲಿಕೆಯು ಬದಲಾದ ರಾಜಕೀಯ ಸ್ಥಿತಿಯಲ್ಲಿ ನಗರಾಡಳಿತ ಕಾಮಗಾರಿ ಆರಂಭಿಸದೆ ಟೆಂಡರ್ ರದ್ದು ಮಾಡುವ ಪ್ರಯತ್ನದ ಹಿಂದೆ ಜನಪ್ರತಿನಿಧಿಗಳ ಹಣದಾಸೆಯ ಲಂಚಕೋರ, ನೀತಿಗೆಟ್ಟ ರಾಜಕೀಯ ನಡೆಯುತ್ತಿರುವುದು ಖೇದಕರ ಎಂದರು.
ರಸ್ತೆ ದುರವಸ್ಥೆಯಿಂದ ಜನ ಕಂಗಾಲಾಗಿದ್ದು ಕೈಕಾಲು ಸೊಂಟ ಮುರಿದುಕೊಂಡು ಒದ್ದಾಡುತ್ತಿದ್ದಾರೆ. ಎಂ.ಆರ್.ಪಿ.ಎಲ್ ನಂತಹ ಬೃಹತ್ ಕಂಪೆನಿಗಳು ಯಥೇಚ್ಚವಾಗಿ ರಸ್ತೆಯನ್ನು ಬಳಸಿದರೂ ರಸ್ತೆ ಅಭಿವೃಧ್ಧಿಗೆ ಮಾತ್ರ ಕೈಜೋಡಿಸುತ್ತಿಲ್ಲ ಎಂದು ಆರೋಪಿಸಿದರು.
ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿ ಚತುಷ್ಪಥ ಕಾಮಗಾರಿ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.