LATEST NEWS
ಬೆಂಗರೆ ಪ್ರದೇಶದ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆತಡೆ ಪ್ರತಿಭಟನೆ
ಬೆಂಗರೆ ಪ್ರದೇಶದ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆತಡೆ ಪ್ರತಿಭಟನೆ
ಮಂಗಳೂರು ಸೆಪ್ಟೆಂಬರ್ 7: ಬೆಂಗರೆ ಪ್ರದೇಶದ ಕೆಟ್ಟು ಹೋಗಿರುವ ಮುಖ್ಯ ರಸ್ತೆ ಹಾಗೂ ಎಲ್ಲಾ ಒಳರಸ್ತೆಗಳ ಡಾಮರೀಕರಣಕ್ಕೆ ಒತ್ತಾಯಿಸಿ ರಸ್ತೆತಡೆ, ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಬೆಂಗರೆ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಿಗೆ ಹಕ್ಕುಪತ್ರ ಗಳಿಲ್ಲ, ಕುಡಿಯುವ ಸರಿಯಾದ ನೀರಿನ ವ್ಯವಸ್ಥೆಯಿಲ್ಲ, ಇಂತಹ ಹಲವು ಗಂಭೀರ ಮೂಲಭೂತ ಸೌಕರ್ಯಗಳಿಲ್ಲದೆ ವಂಚನೆಗೊಳಗಾಗಿರುವ ಇವರಿಗೆ ಕನಿಷ್ಟ ಓಡಾಡಲು ರಸ್ತೆಯನ್ನೇ ನಿರ್ಮಿಸಲಾಗದ ನಗರ ಪಾಲಿಕೆ ಆಡಳಿತ ಇನ್ನು ಯಾವ ಕರ್ಮಕ್ಕಾದರೂ, ಯಾರ ಉದ್ದಾರಕ್ಕಾಗಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರು ವಾಸಿಸುವ ಊರನ್ನು ಈ ರೀತಿ ಕಡೆಗಣೆಸಿರುವ ಆಡಳಿತದ , ಶಾಸಕರ ಬೇಜವಾಬ್ದಾರಿ ಬಹಳ ಖಂಡನೀಯ. ಬಡವರೇ ಹೆಚ್ಚಾಗಿ ವಾಸಿಸುವ ಈ ಊರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲದ್ದಿದ್ದಲ್ಲಿ ಮುಂದಿನ ಹೋರಾಟವನ್ನು ಪಾಲಿಕೆ ಮೇಯರ್ ಕಚೇರಿಗೆ ಮುತ್ತಿಗೆ ಹಾಕಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ಸ್ಥಳಕ್ಕಾಗಮಿಸಿದ ಸುರತ್ಕಲ್ ವಲಯ ಆಯುಕ್ತರು ರವಿಶಂಕರ್ ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು. ಕೂಡಲೇ ಕೆಟ್ಟು ಹೋಗಿರುವ ರಸ್ತೆಗೆ ತಾತ್ಕಾಲಿಕ ರಿಪೇರಿ ನಡೆಸಲಾಗುವುದು ಹಾಗೂ ಶಾಶ್ವತ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.