LATEST NEWS
ರಿಯಾದ್ ಗೆ ಅಪ್ಪಳಿಸಿದ ಮರಳು ಸಹಿತ ಬಿರುಗಾಳಿ – ವಿಡಿಯೋ ವೈರಲ್

ರಿಯಾದ್ ಮೇ 05: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಗೆ ಪ್ರಬಲ ಮರಳು ಸಹಿತ ಬಿರುಗಾಳಿ ಅಪ್ಪಳಿಸಿದೆ. ಇದರಿಂದಾಗಿ ನಗರದಲ್ಲಿ ಗೋಚರತೆ ಸಂಪೂರ್ಣ ಸೊನ್ನೆಗೆ ಮುಟ್ಟಿದೆ. ಜನರಲ್ಲಿ ಮನೆಯಲ್ಲೇ ಇರಲು ಸರಕಾರ ಹೇಳಿದೆ.
ಶನಿವಾರ ಅಲ್ ಖಾಸಿಮ್ ಪ್ರದೇಶದಲ್ಲಿ ಬಲವಾದ ಧೂಳಿನ ಬಿರುಗಾಳಿ ಬೀಸಿತ್ತು, ಬಿರುಗಾಳಿ ಅಬ್ಬರಕ್ಕೆ ಹಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿತ್ತು, ಅಲ್ಲದೆ ಹಲವು ಮರಗಳ ಉರುಳಿ ಬಿದ್ದ ಬಗ್ಗೆ ವರದಿಯಾಗಿದೆ.
ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ (NCM) ಅಲ್ ಖಾಸಿಮ್‌ನಲ್ಲಿ ದೂಳು ಸಹಿತ ಬಿರುಗಾಳಿ ಬಗ್ಗೆ ಮೊದಲೆ ಮುನ್ಸೂಚನೆ ನೀಡಿತ್ತು, ಬಿರುಗಾಳಿಯಿಂದಾಗಿ ಗೋಚರತೆ ಸೊನ್ನೆಯಾಗುವ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಿದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಹೇಳಿತ್ತು.

ಜಜಾನ್, ಅಸಿರ್, ಅಲ್ ಬಹಾ, ಮೆಕ್ಕಾ, ರಿಯಾದ್ ಮತ್ತು ಅಲ್ ಖಾಸಿಮ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಗುಡುಗು, ಆಲಿಕಲ್ಲು ಮತ್ತು ಧೂಳು ಹೆಚ್ಚಿಸುವ ಗಾಳಿ ಬೀಸುವ ಸಾಧ್ಯತೆ ಇದೆ ಎಂದು NCM ಮುನ್ಸೂಚನೆ ನೀಡಿತ್ತು. ಸೌದಿಯಲ್ಲಿ ಬೀಸಿದ ಮರಳು ಮಿಶ್ರಿತ ಬಿರುಗಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೇಸಿಗೆಯ ಮೊದಲು ಭಾರೀ ಧೂಳಿನ ಬಿರುಗಾಳಿಗಳು ಸಾಮಾನ್ಯವಾಗಿದ್ದರೂ, ಬಹಳ ಸಮಯದ ನಂತರ ಇಂತಹ ವಿದ್ಯಮಾನ ಕಂಡುಬರುತ್ತಿದೆ ಎಂದು ರಿಯಾದ್ ನಿವಾಸಿಗಳು ಹೇಳಿದ್ದಾರೆ.