DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ, ಜಿಲ್ಲಾಧಿಕಾರಿ ಘೋಷಣೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ, ಜಿಲ್ಲಾಧಿಕಾರಿ ಘೋಷಣೆ
ಮಂಗಳೂರು, ಅಗಸ್ಟ್ 07: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಳೆ ಕೂಡಾ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ಜೀವನದಿಗಳಾದ ಕುಮಾರಧಾರ ಹಾಗೂ ನೇತ್ರಾವತಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚಾಗುತ್ತಿದೆ.

ನೇತ್ರಾವತಿ ನದಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ತಲುಪುವ ಸಾಧ್ಯತೆಯೂ ಇರುವ ಕಾರಣ ನದಿ ತೀರದಲ್ಲಿರುವ ಜನರಿಗೆ ಎಚ್ಚರಿಕೆಯಿಂದಿರಲೂ ಜಿಲ್ಲಾಡಳಿತ ಸೂಚಿಸಿದೆ.
ಮಂಗಳೂರು-ಕಡೂರು ರಸ್ತೆಯ ಚಾರ್ಮಾಡಿ ಘಾಟ್ ನಲ್ಲಿ ನಿರಂತರವಾಗಿ ಮರ ಹಾಗೂ ಗುಡ್ಡ ರಸ್ತೆಯ ಮೇಲೆ ಬೀಳುತ್ತಿರುವ ಕಾರಣ ಎರಡು ದಿನಗಳ ಕಾಲ ಈ ರಸ್ತೆಯನ್ನು ಮುಚ್ಚಲಾಗಿದೆ.
ಶಿರಾಢಿ ಘಾಟ್ ನಲ್ಲೂ ಅಲ್ಲಲ್ಲಿ ಮರಗಳು ಉರುಳಿದ ಪರಿಣಾಮ ಕೆಲವು ಗಂಟೆಗಳ ಕಾಲಾ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಮಲವಂತಿಗೆ, ದಿಡುಪೆ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ನದಿ ನೀರು ರಸ್ತೆಯಲ್ಲೇ ಹರಿದಿದೆ.
ಕಿಲ್ಲೂರು, ಕೊಲ್ಲಿ ಪ್ರದೇಶದಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮಲವಂತಿಕೆ ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆಯೂ ಬೆಳಕಿಗೆ ಬಂದಿದೆ.