LATEST NEWS
ದುಬೈನಲ್ಲಿ ಮತ್ತೆ ಮಳೆಯ ಆರ್ಭಟ – ಶಾಲಾ ಕಾಲೇಜು ವಿಮಾನ ಹಾರಾಟ ಬಂದ್
ದುಬೈ 03: ಎಪ್ರಿಲ್ ತಿಂಗಳಲ್ಲಿ ಮಳೆಯ ಆರ್ಭಟಕ್ಕೆ ನಲುಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತೆ ಮಳೆ ಪ್ರಾರಂಭವಾಗಿದೆ. ಮರಳುಗಾಡು ದುಬೈ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಯುಎಇಯಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುತ್ತಿರುವುದರಿಂದ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುಡುಗು–ಮಿಂಚು ಹಾಗೂ ವೇಗವಾಗಿ ಬೀಸುತ್ತಿದ್ದ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಹಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದೇಶದಾದ್ಯಂತ 50 ಮಿ.ಮೀ.ನಷ್ಟು ಮಳೆ ಬಿದ್ದಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಹೇಳಿದೆ.
ದುಬೈನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಿಶ್ವದ ಅತಿ ದಟ್ಟಣೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಡಲಿದ್ದ 13 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಐದು ವಿಮಾನಗಳ ಮಾರ್ಗ ಬದಲಿಸಲಾಗಿದೆ.