DAKSHINA KANNADA
ಉಪ್ಪಿನಂಗಡಿ – ಮೀನು ಹಿಡಿಯಲು ಹೋಗಿದ್ದ ವಿಧ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
ಉಪ್ಪಿನಂಗಡಿ ಮೇ 1 : ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಇಲ್ಲಿನ ಕೆಂಪಿಮಜಲು ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ನಡೆದಿದೆ. ಬಜತ್ತೂರು ಗ್ರಾಮದ ಪೆಲತ್ರೋಡಿ ಮನೆ ನಿವಾಸಿ ಓಡಿಯಪ್ಪ ಎಂಬವರ ಪುತ್ರ ರೂಪೇಶ್ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ.
ಶನಿವಾರ ಇಳಂತಿಲ ಗ್ರಾಮದ ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಈತ ತನ್ನ ಸಂಬಂಧಿ ಅಖಿಲೇಶ್ ಎಂಬಾತನೊಂದಿಗೆ ರವಿವಾರ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ಹೋದಾತ ಈಜು ಬಾರದೆ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದ. ಜೊತೆಗಿದ್ದ ಅಖಿಲೇಶ್ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಮೃತರ ತಾಯಿ ಗೋಪಿ ನೀಡಿದ ದೂರನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.