LATEST NEWS
ಸುಧೀಂದ್ರ ತೀರ್ಥ ಜನ್ಮಶತಮಾನೋತ್ಸವ ಪ್ರಯುಕ್ತ ಆಗಸದಲ್ಲಿ ವಿಸ್ಮಯ

ಮಂಗಳೂರು ಫೆ್ಬ್ರವರಿ 17: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಮಾತನಾಡುವ ದೇವರೆಂಬ ಜನಜನಿತವಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸದಲ್ಲಿ ಸ್ಮರಣೀಯವಾಗಲಿರುವ ವಿಶಿಷ್ಟವೊಂದಕ್ಕೆ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಬಾನಂಗಳ ಸಾಕ್ಷಿಯಾಯಿತು.
ಒಂಭತ್ತನೇ ವರ್ಷದ ಜಿಪಿಎಲ್ ಉತ್ಸವ 2025 ರ ಭಾಗವಾಗಿ ಶನಿವಾರ ಮಂಗಳೂರಿನ ಚರಿತ್ರೆಯಲ್ಲಿ ಪ್ರಪ್ರಥಮವಾಗಿ 150 ಡ್ರೋನ್ ಗಳು ಆಗಸದಲ್ಲಿ ಏಕಕಾಲಕ್ಕೆ ಹೊಸ ಸಾಹಸಕ್ಕೆ ಮುನ್ನುಡಿ ಬರೆದವು.
ಸುಧೀಂದ್ರ ತೀರ್ಥ ಸ್ವಾಮೀಜಿಯವರ ಹಾಗೂ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮುಖಾರವಿಂದವನ್ನು ಆಗಸದಲ್ಲಿ ಇರುಳು ಬೆಳಕಿನ ವರ್ಣ ಚಿತ್ತಾರದಲ್ಲಿ ನೋಡಿ ಭಕ್ತರು ಪುಳಕಿತರಾದರು.

ಸುಮಾರು 15 ನಿಮಿಷ ನಡೆದ ಡ್ರೋನ್ ಶೋಗೆ ಶತಸ್ಮರಣ ಎಂದೇ ಹೆಸರಿಡಲಾಗಿತ್ತು. ಅದಕ್ಕೆ ತಕ್ಕಂತೆ ಧಾರ್ಮಿಕ ಆಯಾಮದಲ್ಲಿ ಡ್ರೋನ್ ಗಳ ಚಿತ್ತಾರವನ್ನು ಸಜ್ಜುಗೊಳಿಸಲಾಗಿತ್ತು. ಹಿನ್ನಲೆಯಲ್ಲಿ ಖ್ಯಾತ ಕಲಾವಿದ ಗೋಪಾಲಕೃಷ್ಣ ಭಟ್ ಅವರು ಶ್ರೀಗಳ ಬಗ್ಗೆ, ಕಾಶೀಮಠದ ಬಗ್ಗೆ ನೀಡಿದ ಹಿನ್ನಲೆಧ್ವನಿ, ಸ್ವಾಮೀಜಿಯವರ ಗುಣಗಾನದ ಹಾಡುಗಳಿಗೆ ತಕ್ಕಂತೆ 150 ಡ್ರೋನ್ ಗಳು ಆಗಸದಲ್ಲಿ ಹೆಜ್ಜೆ ಹಾಕುವುದನ್ನು ನೋಡುವುದೇ ಅದ್ಭುತವಾಗಿತ್ತು. ಪ್ರತಿ ವರ್ಷ ಏನಾದರೂ ಹೊಸ ಮೈಲಿಗಲ್ಲಿಗೆ ಕಾರಣೀಕರ್ತರಾಗಿರುವ ಜಿಪಿಎಲ್ ಆಯೋಜಕರ ಈ ಬಾರಿಯ ಪ್ರಯತ್ನ ಯಶಸ್ವಿಯಾಗಿ ಎಲ್ಲರ ಹುಬ್ಬೇರಿಸುವಂತೆ ಆಯಿತು. ಯೂತ್ ಆಫ್ ಜಿಎಸ್ ಬಿ ವಾಹಿನಿ ವತಿಯಿಂದ ನಡೆದ ಈ ಡ್ರೋನ್ ಶೋವನ್ನು ಎ ಎಂ ಎಕ್ಸ್ ಸಂಸ್ಥೆ ಪ್ರಸ್ತುತಪಡಿಸಿತ್ತು. ಶಾಸಕ ವೇದವ್ಯಾಸ ಕಾಮತ್, ಜಿಪಿಎಲ್ ಉತ್ಸವದ ಸಂಚಾಲಕ, ಹ್ಯಾಂಗ್ಯೋ ಸಂಸ್ಥೆಯ ಮಾಲೀಕರಾದ ಪ್ರದೀಪ ಜಿ ಪೈ, ಸೇವಾಂಜಲಿ ವರ್ಷದ ಪ್ರಶಸ್ತಿ ಸ್ವೀಕರಿಸಿದ ಎಂಜಿಬಿಡಬ್ಲು ಪಾಲುದಾರ ಗೋವಿಂದ ಶೆಣೈ, ಭಾರತ್ ಗ್ರೂಪ್ ನ ಸುಬ್ರಾಯ್ ಪೈ, ಕಾಮತ್ ಕೇಟರರ್ಸ್ ನ ಸುಧಾಕರ್ ಕಾಮತ್, ಐಡಿಯಲ್ ಐಸ್ ಕ್ರೀಂ ನ ಮುಕುಂದ್ ಕಾಮತ್, ವಿ ಬಜಾರ್ ನ ವಿಜಯೇಂದ್ರ ಭಟ್, ಶ್ರೇಯಾ ಸ್ವೀಟ್ಸ್ ನ ರಮೇಶ್ ಮಲ್ಯ, ಗೋಕುಲ್ ನಾಥ್ ಪ್ರಭು, ಪುತ್ತೂರು ನರಸಿಂಹ ನಾಯಕ್, ವರದರಾಜ್ ಪೈ, ಶಿಫಾಲಿ ವೈದ್ಯ, ಸಿಎ ಜಗನ್ನಾಥ್ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು.