LATEST NEWS
ಮಂಗಳೂರಿನ ನಳ್ಳಿಯಲ್ಲಿ ಬರುತ್ತಿರುವ ಕೆಂಪು ಬಣ್ಣದ ನೀರು

ಮಂಗಳೂರಿನ ನಳ್ಳಿಯಲ್ಲಿ ಬರುತ್ತಿರುವ ಕೆಂಪು ಬಣ್ಣದ ನೀರು
ಮಂಗಳೂರು ಜೂನ್ 3: ಮಂಗಳೂರು ನಗರಕ್ಕೆ ಸರಬರಾಜು ಮಾಡುತ್ತಿರುನ ಕುಡಿಯುವ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು ಕಳೆದ ಮೂರು ದಿನಗಳಿಂದ ನಗರಕ್ಕೆ ಇದೇ ನೀರು ಪೂರೈಕೆಯಾಗುತ್ತಿದೆ.
ತುಂಬೆ ವೆಂಟೆಡ್ ಡ್ಯಾಮ್ ನಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದು, ನೀರು ಕಲುಷಿತಗೊಂಡು ಕೆಂಪು ಬಣ್ಣಕ್ಕೆ ತಿರುಗಿದರೆ, ಕೆಲವೆಡೆ ನೀರು ಕುಡಿಯಲು ಸಾದ್ಯವಾಗದ ವಾಸನೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬುಧವಾರದಿಂದ ಈ ರೀತಿಯ ನೀರು ಸರಬರಾಜು ಆಗುತ್ತಿದ್ದು, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದೆ. ತುಂಬೆಯಲ್ಲಿ ಕೆಲವು ಹಂತದ ಶುದ್ದೀಕರಣ ನಡೆದರೂ ನೀರಲ್ಲಿ ಕೆಂಪು ಅಂಶ ಉಳಿದುಕೊಂಡಿದೆ. ಇದೇ ನೀರು ನಗರಕ್ಕೆ ಸರಬರಾಜು ಆಗುತ್ತಿದೆ.

ಈಗ ಸರಬರಾಜು ಆಗುತ್ತಿರುವ ನೀರನ್ನು ಸಂಗ್ರಹಿಸಿದರೆ ಬಕೆಟ್ ನ ತಳಭಾಗದಲ್ಲಿ ಕೆಂಪು ಪದರ ಅಂಟಿಕೊಳ್ಳುತ್ತದೆ. ಅದೇ ನೀರನ್ನು ಬಿಸಿ ಮಾಡಿದರೆ ಪಾತ್ರೆಯ ಕೆಳಭಾಗದಲ್ಲಿ ಕೆಂಪು ಮಣ್ಣಿನ ಕಣಗಳು ಸಂಗ್ರಹವಾಗುತ್ತದೆ. ಅಲ್ಲದ ಈ ನೀರನ್ನು ಉಪಯೋಗಿಸಿ ಮಾಡಿದ ಅನ್ನ ಸಂಜೆಯಾಗುತ್ತಿದ್ದಂತೆ ಹಾಳಾಗುತ್ತಿದೆ ಎಂದು ದೂರಲಾಗಿದೆ.
ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಳೆಗಾಲದಲ್ಲಿ ಈ ಸಮಸ್ಯೆ ಇರತ್ತದೆ. ಮಳೆಯ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದು ನೀರು ಬಣ್ಣ ಬದಲಿಸುತ್ತದೆ. ಈಗಾಗಲೇ ನೀರನ್ನು ಪರೀಕ್ಷೆ ಮಾಡಲಾಗಿದ್ದು, ನೀರು ತಿಳಿಯಾಗಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದಷ್ಟು ನೀರನ್ನು ಕುದಿಸಿ ಆರಿಸಿ ಕುಡಿಯಲು ಜಿಲ್ಲಾ ಆರೋಗ್ಯಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.