LATEST NEWS
ಪ್ರಕೃತಿ ತಾಯಿಯಿಲ್ಲದ ಜೀವನ ಏನೇನೂ ಅಲ್ಲ ಎಂದು ಟ್ವೀಟ್ ಮಾಡಿ ಕೆಲವೇ ಗಳಿಗೆಯಲ್ಲಿ ಸಾವನಪ್ಪಿದ ಯುವ ವೈದ್ಯೆ

ಹಿಮಾಚಲ ಪ್ರದೇಶ : ಯುವ ವೈದ್ಯೆಯೊಬ್ಬರು ನಾಗರಿಕರಿಗೆ ಅವಕಾಶ ಇರುವ ಭಾರತದ ಕೊನೆಯ ಕೇಂದ್ರದಲ್ಲಿ ಇದ್ದೇನೆ ಎಂದು ಟ್ವಿಟ್ ಮಾಡಿ ಸಂತೋಷ ಹಚ್ಚಿಕೊಂಡ ಮರು ಗಳಿಗೆಯಲ್ಲಿ ಸಾವು ಅವರನ್ನು ಹಿಂಬಾಲಿಸಿಕೊಂಡು ಬಂದಿದೆ.
ಈ ದುರಂತ ಘಟನೆ ನಿನ್ನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದಿದೆ. ಘಟನೆಯಲ್ಲಿ 9 ಪ್ರವಾಸಿಗರು ಬಲಿಯಾಗಿದ್ದಾರೆ.

ಮೃತ ಒಂಬತ್ತು ಮಂದಿಯಲ್ಲಿ ಜೈಪುರ ಮೂಲದ ಆಯುರ್ವೆದ ಡಾಕ್ಟರ್ ದೀಪಾ ಶರ್ಮಾ ಕೂಡ ಒಬ್ಬರು. ಸಾವಿಗೂ ಕೆಲವೇ ಕ್ಷಣಗಳ ಹಿಂದೆ ಟ್ವೀ ಟ್ ಮಾಡಿದ್ದ ದೀಪಾ, “ನಾಗರಿಕರಿಗೆ ಅವಕಾಶವಿರುವ ಭಾರತದ ಕೊನೆಯ ಕೇಂದ್ರದಲ್ಲಿ ನಿಂತಿದ್ದೇ ನೆ” ಎಂದು ಬರೆದುಕೊಂಡಿದ್ದಾರೆ. 34 ವರ್ಷದ ದೀಪಾ ಅವರ ಟ್ವಿಟರ್ ತುಂಬಾ ಹಿಮಾಚಲ ಪ್ರದೇಶದ ಭೇಟಿಯ ಚಿತ್ರಗಳೇ ತುಂಬಿವೆ.
ನಾಗಸ್ಟಿ ಐಟಿಬಿಪಿ ಚೆಕ್ಪೋಸ್ಟ್ ಬಳಿ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಭಾನುವಾರ ಮಧ್ಯಾಹ್ನ 12.59ಕ್ಕೆ ಪೋಸ್ಟ್ ಮಾಡಿದ್ದಾರೆ. ಸಾಂಗ್ಲಾ-ಚಿಟ್ಕುಲ್ ರಸ್ತೆಯ ಬಸ್ತೇ ರಿ ಬಳಿ ಮಧ್ಯಾಹ್ನ 1.25ರ ಸುಮಾರಿಗೆ ಅನೇಕ ಭೂಕುಸಿತಗಳು ಸಂಭವಿಸಿವೆ. ದೀಪಾ ಅವರು ತಮ್ಮ ಪ್ರಯಾಣದ ಫೋಟೋಗಳನ್ನು ಶೇರ್ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸಿದೆ. ಎತ್ತರ ಬೆಟ್ಟದಿಂದ ಬಂಡೆಗಳು ನೆಲಕ್ಕೆ ಉರುಳಿದವು. ಬೃಹತ್ ಗಾತ್ರದ ಬಂಡೆಗಳ ವೇಗಕ್ಕೆ ದಾರಿಯಲ್ಲಿ ಸಿಕ್ಕ ವಸ್ತುಗಳೆಲ್ಲ ಪುಡಿ ಪುಡಿಯಾದವು. ಒಂದು ಬಂಡೆ ನೇರವಾಗಿ ಸೇತುವೆ
ಬಡಿದ ಪರಿಣಾಮ ಕ್ಷಣಾರ್ಧದಲ್ಲೇ ಸೇತುವೆ ಉರುಳಿತು. ಈ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ. ಪ್ರಕೃತಿ ತಾಯಿಯಿಲ್ಲದ ಜೀವನ ಏನೇನೂ ಅಲ್ಲ ಎಂದು ದೀಪಾ ಬರೆದುಕೊಂಡಿದ್ದಾರೆ. ಆದರೆ, ಅದೇ ಪ್ರಕೃತಿ ವಿಕೋಪದ ಮಡಿಲಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಯುವ ವೈದ್ಯೆಯ ಸಾವಿಗೆ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ.