Connect with us

LATEST NEWS

ವೈರಲ್ ಪೋಸ್ಟ್ ಗಾಗಿ ಭವಿಷ್ಯ ಹಾಳು ಮಾಡಬೇಡಿ, ಯುವಕರಿಗೆ ಎಚ್ಚರಿಕೆ ಕಿವಿಮಾತು ನೀಡಿದ ಮಂಗಳೂರು ಪೊಲೀಸ್ ಆಯುಕ್ತರು

ಮಂಗಳೂರು, ಮೇ 8: ಯುವಕರು ಅಜ್ಞಾತವಾಗಿ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದು, ಅವರ ಭವಿಷ್ಯ, ಉದ್ಯೋಗಾವಕಾಶಗಳು ಮತ್ತು ಪ್ರವಾಸ ಅವಕಾಶಗಳು ಹಾಳಾಗುತ್ತಿವೆ. ಹಾಗಾಗಿ ವೈರಲ್ ಪೋಸ್ಟ್ಗಳ ಬಲೆಗೆ ಬೀಳಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಯುವಕರಿಗೆ ಎಚ್ಚರಿಕೆ ಕಿವಿಮಾತು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಫೇಸ್ ಬುಕ್, ಇನ್ ಸ್ಟ್ರಾಗ್ರಾಂ, ವಾಟ್ಸ್ ಆ್ಯಪ್ ಗುಂಪುಗಳು ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು, ತಪ್ಪು ಮಾಹಿತಿ ಮತ್ತು ಬೆದರಿಕೆ ಸಂದೇಶ ಹರಡುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಸಮುದಾಯಗಳ ನಡುವೆ ಅಸಮಾಧಾನ ಉಂಟು ಮಾಡಲು ಸುಳ್ಳು ಸುದ್ದಿ ಹರಡಲು ಮತ್ತು ಇತರರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, ಗಂಭೀರವಾಗಿ ಪರಿಣಿಸುತ್ತಿದ್ದೇವೆ.

ಕಳೆದ ಒಂದು ವಾರದಲ್ಲಿ 30ಕ್ಕೂ ಅಧಿಕ ಕೋಮು ದ್ವೇಷ ಮತ್ತು ಸುಳ್ಳು ಪೋಸ್ಟ್ಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣಗಳನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.

ನಕಲಿ ಖಾತೆಗಳನ್ನು ಪತ್ತೆ ಹಚ್ಚಲಾಗದು ಎಂಬುದು ತಪ್ಪು ಕಲ್ಪನೆ

ಕೆಲವರು ನಕಲಿ ಪ್ರೊಫೈಲ್ ಗಳು ಅಥವಾ ವಿದೇಶದಲ್ಲಿ ನೋಂದಾಯಿತ ಖಾತೆಗಳನ್ನು ಬಳಸುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಅವರನ್ನು ಪತ್ತೆ ಹಚ್ಚಲಾಗದು ಎಂದು ಭಾವಿಸಿಕೊಂಡಿದ್ದರೆ, ಅದು ಸಂಪೂರ್ಣ ತಪ್ಪು. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ಕಂಪೆನಿಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಚಾಲನ್ ಗಳೊಂದಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಗುರುತಿಸಲು ಕೆಲಸ ಮಾಡುತ್ತಿವೆ. ಖಾತೆ ಎಲ್ಲಿಂದ ತೆರೆಯಲ್ಪಟ್ಟಿದ್ದರೂ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಸಲಹೆಗಳು:

*ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಿ.

* ದ್ವೇಷ ಭಯ ಅಥವಾ ಸುಳ್ಳು ಮಾಹಿತಿ ಪ್ರಚಾರ ಮಾಡುವ ಅಥವಾ ಹಂಚುವ ಸಂದೇಶಗಳನ್ನು ಪೋಸ್ಟ್ ಮಾಡಬೇಡಿ.

*ಶಾಂತಿಯ ರಕ್ಷಕರಾಗಿ ಇರಿ, ಅಶಾಂತಿಯ ಏಜೆಂಟ್ ಗಳಾಗಬೇಡಿ.

* ದ್ವೇಷ ಸಂದೇಶಗಳು ಬಂದಾಗ ಅವುಗಳನ್ನು ಹಂಚಬೇಡಿ- ಮಾಹಿತಿ ನೀಡಿ.

ಅಪರಾಧಗಳು ಮತ್ತು ಶಿಕ್ಷೆಗಳು:

*ಗುಂಪುಗಳ ನಡುವೆ ದ್ವೇಷ ಉಂಟು ಮಾಡುವುದು (ಕಲಂ 196, ಬಿಎನ್ ಎಸ್)

ಒಂದು ಧರ್ಮ ಅಥವಾ ಸಮುದಾಯವನ್ನು ದೋಷಾರೋಪಣೆ ಮಾಡುವ ಸಂದೇಶ ಅಥವಾ ವೀಡಿಯೋ ಪೋಸ್ಟ್ ಮಾಡುವುದು, ಅದು ಕೋಪ ಅಥವಾ ದ್ವೇಷ ಉಂಟುಮಾಡುವ ಉದ್ದೇಶ ಹೊಂದಿರುತ್ತದೆ.

ಶಿಕ್ಷೆ: 5 ವರ್ಷ ಜೈಲು ಅಥವಾ ದಂಡ ಅಥವಾ ಎರಡೂ.

*ಗಲಭೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವುದು (ಕಲಂ 196, ಬಿಎನ್ ಎಸ್)

‘ಯಾವುದೋ ಒಂದು ಸಮುದಾಯದವರು ದಾಳಿ ಮಾಡಲು ಯೋಜಿಸುತ್ತಿದ್ದಾರೆ’ ಎಂದು ಸುಳ್ಳು ವದಂತಿ ಹಂಚುವುದು, ಇದು ಜನರನ್ನು ಒಟ್ಟುಗೂಡಿಸಿ ಉದ್ವಿಗ್ನತೆ ಉಂಟುಮಾಡಬಹುದು.

ಶಿಕ್ಷೆ: 6 ತಿಂಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.

*ವ್ಯಕ್ತಿಗಳನ್ನು ಬೆದರಿಸುವುದು (ಕಲಂ 351(1) ಬಿಎನ್ ಎಸ್)

‘ನೀವು ಮತ್ತೆ ಮಾತನಾಡಿದರೆ ನಿಮಗೆ ಪಾಠ ಕಲಿಸುತ್ತೇನೆ’ ಎಂಬ ಸಂದೇಶ ಕಳುಹಿಸುವುದು ಇದು ಯಾರಿಗಾದರೂ ಭಯ ಉಂಟು ಮಾಡುವ ಉದ್ದೇಶ ಹೊಂದಿರುತ್ತದೆ.

ಶಿಕ್ಷೆ: 7 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.

*ಪದಗಳು ಅಥವಾ ಆನ್ ಲೈನ್ ಮೂಲಕ ದ್ವೇಷ ಭಾಷಣ (ಕಲಂ 351 (1)(ಎ), ಬಿಎನ್ ಎಸ್)

ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿ ಹಿಂಸೆ ಅಥವಾ ಸಂಭವಿಸದ ಘಟನೆಗಳ ಬಗ್ಗೆ ಸಂಪಾದಿತ ವೀಡಿಯೋಗಳು ಅಥವಾ ಪರಿಶೀಲಿಸದ ಸುದ್ದಿಗಳನ್ನು ಪೋಸ್ಟ್ ಮಾಡುವುದು.

ಶಿಕ್ಷೆ: 3 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಮುಂಜಾಗೃತಾ ಕಾನೂನು ಕ್ರಮ:

ಸಾರ್ವಜನಿಕ ಶಾಂತಿ ಕಾಪಾಡಲು ಮತ್ತು ಪುನ: ಅಪರಾಧಗಳನ್ನು ತಡೆಯಲು ಮಂಗಳೂರು ನಗರ ಪೊಲೀಸ್ ಇಲಾಖೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ ಎಸ್ ಎಸ್) ಕಲಂಗಳು 126 ಮತ್ತು 129ರ ಅಡಿಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿದೆ.

*ಸಂಬಂಧಿತ ಆರೋಪಿಗಳನ್ನು ಬಾಂಡ್ ಓವರ್ ಮಾಡಲಾಗುತ್ತಿದೆ- ಅಂದರೆ ಅವರು ನಿರ್ದಿಷ್ಟ ಅವಧಿಗೆ ಉತ್ತಮ ನಡವಳಿಕ ಕಾನೂನು ಬಾಂಡ್ ಮೇಲೆ ಸಹಿ ಮಾಡಲಬೇಕಾಗುತ್ತದೆ.

* ಈ ಅವಧಿಯಲ್ಲಿ ಅವರು ಮತ್ತೊಂದು ಅಪರಾಧ ಮಾಡಿದರೆ ಅವರು ಹಣದ ದಂಡ ಅಥವಾ ಜೈಲು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರಕಟನೆಯ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಯಾವುದೇ ಅನುಮಾನಾಸ್ಪದ ವಿಷಯವನ್ನು ತಕ್ಷಣ ಮಾಹಿತಿಗಾಗಿ ನೋಡಲ್ ಅಧಿಕಾರಿ – ಎಸಿಪಿ ಸೆನ್ ಪೊಲೀಸ್ ಠಾಣೆ 94480802321ಗೆ ದೂರು ನೀಡಿ. ನಿಮ್ಮ ಗುರುತು ಗೌಪ್ಯವಾಗಿರುತ್ತದೆ. -ಅನುಪಮ್ ಅಗ್ರವಾಲ್, ಮಂಗಳೂರು ನಗರ ಪೊಲೀಸ್ ಆಯುಕ್ತರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *