LATEST NEWS
ತಂಬಾಕು ಕಂಪೆನಿಗಳೊಂದಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ- ಹೆಪ್ಸಿಬಾ ರಾಣಿ ಕೊರ್ಲಪಾಟಿ

ತಂಬಾಕು ಕಂಪೆನಿಗಳೊಂದಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ- ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ, ಜುಲೈ 9 : ಸರಕಾರಿ ಇಲಾಖೆಗಳು, ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕಂಪನಿಗಳೊಂದಿಗೆ ಯಾವುದೇ ಸಮಾರಂಭದ ಆಯೋಜನೆ, ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು, ಅವರು ನೀಡುವ ಅನುದಾನ, ಪರಿಕರಗಳುಗಳನ್ನು ಯಾವುದೇ ಇಲಾಖೆಗಳು ಪಡೆಯಬಾರದು, ಇದು ವಿಶ್ವ ಆರೋಗ್ಯ ಸಂಸ್ಥೆಯ ಎಫ್.ಸಿ.ಟಿ.ಸಿ ನಿಯಮದ ಉಲ್ಲಂಘನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶ ಉಡುಪಿ ಜಿಲ್ಲೆ ಇದರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ಉದ್ದೇಶದಿಂದ, ಸರಕಾರಿ ಸಂಸ್ಥೆಗಳೊಂದಿಗೆ ಸೇರಿ ಕಾರ್ಯಕ್ರಮಗಳ ಆಯೋಜಿಸುವ ಸಾಧ್ಯತೆಯಿದ್ದು, ಇದರಿಂದ ತಂಬಾಕು ಉತ್ಪನ್ನಗಳ ಬಳಕೆಗೆ ನಾವೇ ಸಹಕಾರ ನೀಡಿದಂತಾಗುತ್ತದೆ ಆದ್ದರಿಂದ ಎಲ್ಲಾ ಇಲಾಖೆಗಳು ತಂಬಾಕು ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳೊಂದಿಗೆ ಯಾವುದೇ ರೀತಿಯಲ್ಲಿ ನೆರವು ಅಥವಾ ಸಹಕಾರ ನೀಡದಂತೆ ತಿಳಿಸಿದ ಜಿಲ್ಲಾಧಿಕಾರಿ, ವಿಶ್ವ ಆರೋಗ್ಯ ಸಂಸ್ಥೆಯ ಎಫ್.ಸಿ.ಟಿ.ಸಿ ನಿಯಮಗಳ ಕುರಿತಂತೆ ಎಲ್ಲಾ ಕಚೇರಿಗಳಲ್ಲಿ ಸೂಕ್ತ ಫಲಕಗಳನ್ನು ಅಳವಡಿಸುವಂತೆ ಸೂಚಿಸಿ, ಈ ಫಲಕಗಳನ್ನು ಆರೋಗ್ಯ ಇಲಾಖೆ ಮೂಲಕ ಪಡೆಯುವಂತೆ ತಿಳಿಸಿದರು.