LATEST NEWS
‘ಹಲಾಲ್ ಮಾಂಸ ಸೇವಿಸಿ ಧರ್ಮ ಭ್ರಷ್ಟರಾಗಬೇಡಿ’; ಕೇಂದ್ರ ಸಚಿವ ಮನವಿ..!
ಪಾಟ್ನಾ: ಕೆಲವು ದಿನಗಳ ಹಿಂದೆ ದೇಶಾದ್ಯಂತ ಭಾರೀ ಚರ್ಚೆಯಾಗಿದ್ದ ಹಲಾಲ್ ಮಾಂಸದ (Halal Products) ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ʼʼಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದನ್ನು ತ್ಯಜಿಸಬೇಕು ಮತ್ತು ಒಂದೇ ಹೊಡೆತದಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸವಾದ ‘ಜಟ್ಕಾ’ (Jhatka) ಅನ್ನು ಮಾತ್ರ ಸೇವಿಸಬೇಕುʼʼ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ (Giriraj Singh) ಕರೆ ನೀಡಿದ್ದಾರೆ.
ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ವನ್ನು ಹಾಳು ಮಾಡುವುದಿಲ್ಲ ಎಂದು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು. ʼʼಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕುʼʼ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.ʼʼಹಿಂದೂ ವಧೆಯ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲ ಒಂದೇ ಹೊಡೆತಕ್ಕೆ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ಭ್ರಷ್ಟಗೊಳಿಸಬಾರದು. ಯಾವಾಗಲೂ ಜಟ್ಕಾ ವಿಧಾನವನ್ನೇ ಆಯ್ದುಕೊಳ್ಳಬೇಕು” ಎಂದು ಗಿರಿರಾಜ್ ಸಿಂಗ್ ಕಿವಿಮಾತು ಹೇಳಿದ್ದಾರೆ. ಕಸಾಯಿಖಾನೆಗಳು ಮತ್ತು ಜಟ್ಕಾ ಮಾಂಸವನ್ನು ಮಾತ್ರ ಮಾರಾಟ ಮಾಡುವ ಅಂಗಡಿಗಳು ಇರುವ ಹೊಸ ಮಾದರಿಯ ವ್ಯವಹಾರದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ವಿಶೇಷ ಎಂದರೆ, ಕೆಲವು ವಾರಗಳ ಹಿಂದೆ ಗಿರಿರಾಜ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು ನೆರೆಯ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಸ್ಫೂರ್ತಿ ಪಡೆದು ʼಹಲಾಲ್ʼ ಎಂದು ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಕೋರಿದ್ದರು.