DAKSHINA KANNADA
ಕೊನೆಗೂ ಸಿಕ್ಕ ನೆರೆಯಲ್ಲಿ ಕೊಚ್ಚಿ ಹೋಗಿದ್ದ ನಾಯಿ ಮರಿಗಳು….!!
ಕೊಲ್ಲಮೊಗ್ರ ಅಗಸ್ಟ್ 05: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನೆ ಸೃಷ್ಠಿಸಿದೆ. ನೂರಾರು ಮನೆಗಳು ಜಲಾವೃತವಾಗಿದ್ದು, ಕೃಷಿ ಭೂಮಿಗಳು ಭೂಕುಸಿತಕ್ಕೆ ಸಂಪೂರ್ಣ ಹಾನಿಯಾಗಿವೆ. ಮಳೆ ಪ್ರವಾಹಕ್ಕೆ ಜನ ಜಾನುವಾರುಗಳು ಕೊಚ್ಚಿ ಹೋಗಿದೆ.
ಅಗಸ್ಟ್ 1 ರಂದು ಕೊಲ್ಲಮೊಗ್ರದ ಇಡೀ ಗ್ರಾಮ ಜಲಾವೃತಗೊಂಡಿದ್ದು, ಈ ಸಂದರ್ಭ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಎರಡು ಮುದ್ದಾದ ನಾಯಿ ಮರಿಗಳು ಮತ್ತೆ ಮನೆ ಸೇರಿವೆ. ದೋಲನಮನೆ ಲಲಿತಾ ಎಂಬವರ ಮನೆ ಪ್ರವಾಹದಿಂದಾಗಿ ಕೊಚ್ಚಿಹೋಗಿತ್ತು, ಈ ಸಂದರ್ಭ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರುಪಾಲಾಗಿದ್ದವು, ಅಲ್ಲದೆ ಮನೆ ಹಸುವೊಂದು ನೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಮನೆಯಲ್ಲಿ ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಪಮೋರಿಯನ್ ಜಾತಿಯ ಶ್ವಾನಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು.
ಈ ನಡುವೆ ಎರಡು ದಿನಗಳ ಬಳಿಕ ದುಃಖದ ನಡುವೆ ಸಂತಸ ಕ್ಷಣ ಒಂದು ಎದುರಾಯಿತು. ಕೊಚ್ಚಿ ಹೋದ ರಾಜು- ರಾಣಿ ಶ್ವಾನಗಳು ಬದುಕಿವೆ ಎಂಬ ಮಾಹಿತಿಯು ದುಃಖದಲ್ಲಿದ್ದ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಶ್ವಾನಗಳ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಗ್ರಾಮ ಪಂಚಾಯಿತಿ ಸದಸ್ಯ ಮಾಧವ ಚಾಂತಳ ಸಹಕರಿಸಿದ್ದಾರೆ ಎಂದು ಹೇಮಂತ್ ಸ್ಮರಿಸಿದರು.