DAKSHINA KANNADA
ಅಯ್ಯಪ್ಪ ವೃತಧಾರಿಗಳ ಜೊತೆ ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಹೊರಟ ಶ್ವಾನ..!
ಪುತ್ತೂರು ನವೆಂಬರ್ 20: .ಯಾವುದೇ ಜಾತಿ ಮತ ಧರ್ಮದ ಬೇದವಿಲ್ಲದೆ ಪ್ರತಿಯೊಬ್ಬರನ್ನು ಸಮಾನರನ್ನಾಗಿ ಕಾಣುವ ಏಕೈಕ ದೇವಸ್ಥಾನ ಶಬರಿಮಲೆ. ದೇಶದಲ್ಲಿ ಅತೀ ಹೆಚ್ಚು ಭಕ್ತರನ್ನು ಸೆಳೆಯುವ ದೇವಸ್ಥಾನವಾಗಿರುವ ಶಬರಿಮಲೆ ಇದೀಗ ಮಂಜಲ ಪೂಜೆಗಾಗಿ ಮತ್ತೆ ತೆರೆದಿದೆ. ಈಗಾಗಲೇ ಶಬರಿಮಲೆ ಭಕ್ತರು ವೃತಕೈಗೊಂಡು ಶಬರಿಮಲೆ ಕಡೆಗೆ ತೆರಳುತ್ತಿದ್ದಾರೆ. ಅದರಲ್ಲೂ ಕಾಲ್ನಡಿಗೆ ಮೂಲಕ ಅಯ್ಯಪ್ಪನ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದೆ. ಈ ರೀತಿ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಜೊತೆ ಶ್ವಾನಗಳು ತೆರಳುವ ಉದಾಹರಣೆಗಳು ಹಲವಾರು ಇದ್ದು. ಇದೀಗ ಇಂತಹುದೆ ಒಂದು ಘಟನೆ ನಡೆದಿದೆ.
ನಾಯಿಯೊಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಕ್ಕೇರಿ ಗ್ರಾಮದ ಅಯ್ಯಪ್ಪ ಭಕ್ತರ ಜೊತೆ 600 ಕಿಲೋಮೀಟರ್ ಸಾಗಿ ಕೇರಳದ ಕಾಸರಗೋಡು ಜಿಲ್ಲೆಯನ್ನು ತಲುಪಿದೆ. ನವಂಬರ್ 4 ರಂದು ಬೆಳ್ಳೇರಿ ಗ್ರಾಮದ 10 ಮಂದಿ ಅಯ್ಯಪ್ಪ ವೃತಾಧಾರಿಗಳು ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳಿದ್ದರು. ತಮ್ಮ ಗ್ರಾಮದಿಂದ ಸುಮಾರು 40 ಕಿಲೋಮೀಟರ್ ದೂರ ಕ್ರಮಿಸಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ಶ್ವಾನವೊಂದು ಸದ್ದಿಲ್ಲದೆ ಹಿಂಬಾಲಿಸುತ್ತಿರುವುದು ತಂಡದ ಸದಸ್ಯರ ಗಮನಕ್ಕೆ ಬಂದಿತ್ತು.
ಶ್ವಾನವನ್ನು ಎಷ್ಟು ಓಡಿಸಿದರೂ ಶ್ವಾನ ಅಯ್ಯಪ್ಪ ಭಕ್ತರನ್ನು ಹಿಂಬಾಲಿಸುವುದನ್ನು ಬಿಟ್ಟಿಲ್ಲ. ಬಳಿಕ ದಾರಿ ಕಾಣದೆ ಅಯ್ಯಪ್ಪ ಭಕ್ತಾಧಿಗಳು ಆ ಶ್ವಾನವನ್ನೂ ತಮ್ಮ ಜೊತೆ ಸೇರಿಸಿಕೊಂಡು ಸುಮಾರು 600 ಕಿಲೋಮೀಟರ್ ಸಾಗಿ ಇದೀಗ ಕಾಸರಗೋಡು ತಲುಪಿದ್ದಾರೆ. ಶ್ವಾನ ನಮ್ಮ ಜೊತೆನೇ ಬರುತ್ತಿದ್ಧು, ನಾವು ನೀಡಿದ ಆಹಾರವನ್ನೇ ಸೇವಿಸುತ್ತದೆ. ಬೇರೆ ಯಾವುದೇ ಆಹಾರವನ್ನು ಸೇವಿಸುವುದಿಲ್ಲ.
ಬೆಳಿಗ್ಗೆ 3 ಗಂಟೆ ಹೊತ್ತಿಗೆ ಪ್ರತಿದಿನ ಕಾಲ್ನಡಿಗೆಯನ್ನು ಆರಂಭಿಸುತ್ತೇವೆ. ರಾತ್ರಿ 8 ಗಂಟೆಗೆ ದಾರಿ ಮಧ್ಯೆ ಸಿಗುವ ದೇವಸ್ಥಾನಗಳಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತೇವೆ. ಶ್ವಾನ ಕೂಡಾ ನಾವು ತಂಗುವ ಪಕ್ಕದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ನಾವು ಹೊರಡುವ ಮೊದಲೇ ಶ್ವಾನ ಕೂಡಾ ಹೊರಟು ನಿಲ್ಲುತ್ತದೆ ಎನ್ನುತ್ತಾರೆ ಅಯ್ಯಪ್ಪ ಮಾಲಾಧಾರಿ ಮೌನೇಶ್ ರಾಚಪ್ಪ ಬಡಿಗೇರ್. ಪಾದಯಾತ್ರೆ ಆರಂಭಿಸಿ ಈಗಾಗಲೇ 14 ದಿನಗಳು ಕಳೆದಿದ್ದು, 600 ಕಿಲೋಮೀಟರ್ ಶ್ವಾನವೂ ನಮ್ಮ ಜೊತೆಗೇನೇ ಬರುತ್ತಿದೆ. ಅಯ್ಯಪ್ಪ ಸ್ವಾಮಿಯೇ ನಮ್ಮ ಜೊತೆಗೆ ನಮಗಾಗಿ ಬರುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದ್ದು, ಇನ್ನೂ 500 ಕಿಲೋಮೀಟರ್ ನಮ್ಮ ಜೊತಗೇ ಬರುತ್ತದೆ ಎನ್ನುವ ಭರವಸೆಯೂ ಇದೆ. ಮುಂದಿನ ಡಿಸೆಂಬರ್ 4 ಅಥವಾ 5 ನೇ ತಾರೀಖಿಗೆ ಶಬರಿಮಲೆ ತಲುಪಲಿದ್ದೇವೆ ಎನ್ನುತ್ತಾರೆ.