LATEST NEWS
ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ನಾಯಿಮರಿಗೆ ಆಸರೆಯಾದ ವಿಧ್ಯಾರ್ಥಿನಿಯ ಐಡಿಯಾ…!!

ಕುಂದಾಪುರ ಜೂನ್ 23: ತನ್ನ ಹಿಂಬದಿಯ ಎರಡೂ ಕಾಲುಗಳನ್ನು ಕಳೆದುಕೊಂಡು ತಿರುಗಾಡಲು ಆಗದೆ ಸಂಕಷ್ಟದಲ್ಲಿದ್ದ ನಾಯಿ ಮರಿಗೆ ವಿಧ್ಯಾರ್ಥಿನಿಯೊಬ್ಬಳು ಮತ್ತೆ ತಿರುಗಾಡುವಂತೆ ಮಾಡಿದ್ದಾಳೆ. ಸದ್ಯ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಾಡುತ್ತಿರುವ ನಾಯಿ ಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ, ಹೊಸಂಗಡಿ ಕೆಪಿಸಿಎಲ್ ಘಟಕದ ಆವರಣದಲ್ಲಿ ಪುಟ್ಟ ನಾಯಿಮರಿಯೊಂದು ಅಪಘಾತಕ್ಕೀಡಾಗಿ ತನ್ನ ಹಿಂಬದಿಯ ಎರಡೂ ಕಾಲುಗಳನ್ನು ಕಳೆದುಕೊಂಡು ಬಿದ್ದಿತ್ತು. ಸುಮಾರು 15 ದಿನಗಳ ಹಾಗೆ ಬಿದ್ದಿದ್ದರೂ ಯಾರೂ ಅದರ ಹತ್ತಿರ ಕೂಡ ಸುಳಿದಿರಲಿಲ್ಲ. ಆದರೆ ಸ್ಥಳೀಯ ನಿವಾಸಿ ಹಾಗೂ ಕೆಪಿಸಿಎಲ್ ನಲ್ಲಿ ಉದ್ಯೋಗ ಮಾಡುವ ಕೆ.ರಾಮಸ್ವಾಮಿ ಹಾಗೂ ವೀಣಾ ದಂಪತಿಗಳ ಪುತ್ರಿಯಾದ ಪ್ರಿಯಾ ಎಂ.ಆರ್ ಈ ಅಸಹಾಯಕ ನಾಯಿಯನ್ನು ಗಮನಿಸಿದ್ದಾರೆ. ನಾಯಿಯ ಸ್ಥಿತಿಗೆ ಮರುಗಿದ ಪ್ರಿಯಾ, ಹೊಟ್ಟೆಗಿಷ್ಟು ಆಹಾರ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ತೆವಳಿಕೊಂಡು ಮನೆ ಬಾಗಿಲಿಗೇ ಆಗಮಿಸಿತ್ತು. ಪ್ರಥಮ ಚಿಕಿತ್ಸೆ ನೀಡಿ ಮನೆಯಲ್ಲೇ ಉಳಿಸಿ ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ.

ನಾಯಿ ಓಡಾಡಲು ಏನಾದರೂ ಮಾಡಬೇಕೆಂದು ಪ್ರಿಯಾ ಎರಡು ಉದ್ದದ ಪಿವಿಸಿ ಪೈಪ್ ಹೊಟ್ಟೆ ಕೆಳಭಾಗಕ್ಕೆ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಸೊಂಟದ ಬಳಿ ಎರಡೆರಡು ಕಡೆ ಪಟ್ಟಿಗೆ ಮತ್ತೆರಡು ಪೈಪ್ ಜೋಡಿಸಿದರು. ಸೊಂಟದ ಬಳಿ ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ಆತುಕೊಳ್ಳುವಂತೆ ಮಾಡಿದರು. ಗಾಲಿಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಬಳಿಕ ಈಗ ಸ್ವಚ್ಛಂದವಾಗಿ ತಿರುಗಾಡುತ್ತಿದೆ.
ಬದುಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ನಾಯಿ ಎಲ್ಲೆಂದರಲ್ಲಿ ಓಡಾಡುತ್ತಾ ಕೀಟಲೆ ಮಾಡುತ್ತಾ ತನಗೆ ಮರುಜೀವ ಕೊಟ್ಟ ಕುಟುಂಬದವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ.