LATEST NEWS
ನಾಯಿಗಾಗಿ ರಸ್ತೆ ಮಧ್ಯೆ ಜಗಳಕ್ಕೆ ನಿಂತ ಯುವಕ ಯುವತಿ…!!

ಉಡುಪಿ: ನಾಯಿಗಾಗಿ ಯುವಕ ಹಾಗೂ ಯುವತಿಯೊಬ್ಬಳ ನಡುವೆ ನಡು ರಸ್ತೆಯಲ್ಲಿ ಜಗಳ ನಡೆದ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ನಾಯಿ ಜಗಳ ಬಿಡಿಸಲು ಕೊನೆಗೆ ಪೊಲೀಸರು ಕೂಡ ಮಧ್ಯಪ್ರವೇಶಿಸಬೇಕಾಯಿತು.
ಉಡುಪಿಯ ಅಜ್ಜರಕಾಡಿನಲ್ಲಿರುವ ಪೆಟ್ ಚಾಯ್ಸ್ ಮಳಿಗೆ ಮುಂದೆಯೇ ಈ ಜಗಳ ನಡೆದಿದೆ. ಯುವಕನೊಬ್ಬ ಸಾಕುನಾಯಿಯೊಂದಿಗೆ ಪೆಟ್ ಚಾಯ್ಸ್ ಮಳಿಗೆಗೆ ಬಂದಿದ್ದ. ನಾಯಿಗೆ ಬೇಕಾದ ಆಹಾರ ಖರೀದಿಗಾಗಿ ಈತ ಬಂದಿದ್ದ ವೇಳೆ ನಾಯಿಯನ್ನು ಕಂಡ ಯುವತಿಯೊಬ್ಬಳು ಅದು ನನ್ನ ನಾಯಿ, ನಾನು ಸಾಕಿದ್ದ ನಾಯಿ ಎಂದು ಜಗಳ ತೆಗೆದಿದ್ದಾಳೆ.

ಆದರೆ ಇದಕ್ಕೊಪ್ಪದ ಯುವಕ ಇದು ನಾನು ಖರೀದಿಸಿದ್ದ ನಾಯಿ, ಇದು ನನ್ನ ನಾಯಿ ಎಂದು ಪ್ರತಿವಾದ ಮಾಡಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಬಗೆಹರಿಸಲು ಮುಂದಾದರು.
ತಕ್ಷಣಕ್ಕೆ ನಾಯಿಯ ನಿಜವಾದ ಮಾಲೀಕರು ಯಾರು ಎಂಬುದನ್ನು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ತನಿಖೆಗೆ ಮುಂದಾಗಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಯಾರೋ ನಾಯಿಯನ್ನು ಕದ್ದಿದ್ದು, ಅದನ್ನು ಈ ಯುವಕನಿಗೆ ಮಾರಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಇವರಿಬ್ಬರ ನಡುವಿನ ಜಗಳದಿಂದ ನಾಯಿ ಗೊಂದಲಕ್ಕೆ ಒಳಗಾದರೂ ಕೊನೆಗೆ ಚಿಕ್ಕಂದಿನಿಂದ ಸಾಕಿದ್ದಳೆನ್ನಲಾದ ಯುವತಿಯೊಂದಿಗೇ ನಾಯಿ ತೆರಳಿದೆ.