Connect with us

LATEST NEWS

ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ: ಮನೋಜ್ ಜೈನ್

ಉಡುಪಿ, ಡಿಸೆಂಬರ್ 6 : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೊಂಡಿರುವ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಕಾರ್ಯಕ್ರಮಗಳನ್ನು ನಿಗಧಿತ ಕಾಲಾವಧಿಯೊಳಗೆ ಸಂಪೂರ್ಣ ಅನುದಾನ ಬಳಕೆಯೊಂದಿಗೆ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಜನಪರ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿರುವುದರೊಂದಿಗೆ ಅನುದಾನವನ್ನು ಒದಗಿಸಿದೆ. ಸಂಬಂಧಪಟ್ಟ ಇಲಾಖೆಗಳು ತಮಗೆ ನೀಡಿರುವ ಭೌತಿಕ, ಆರ್ಥಿಕ ಗುರಿಯನ್ನು, ಪ್ರಾಕೃತಿಕ ವಿಕೋಪದಡಿ ನೀಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಅನುದಾನವನ್ನು ಬಳಕೆಯೊಂದಿಗೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಸಾಧಿಸಬೇಕು ಎಂದರು.

ಕಂದಾಯ ಇಲಾಖೆ ಅಡಿಯಲ್ಲಿ ವಿವಿಧ ಸವಲತ್ತುಗಳು, ಭೂ ದಾಖಲೆಗಳ ಬದಲಾವಣೆ, ಸರ್ವೇ ಕಾರ್ಯಗಳ ಅರ್ಜಿ, ಜಮೀನು ಕೋರಿ ಬರುವ ಅರ್ಜಿ, ಅಕ್ರಮ ಸಕ್ರಮ ಸೇರಿದಂತೆ ಮತ್ತಿತರ ಕೋರಿ ಬಂದ ಅರ್ಜಿಗಳನ್ನು ನಿಯಮಾನುಸಾರ ವಿಳಂಬವಿಲ್ಲದೇ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದ ಅವರು, ಅಕ್ರಮ ಒತ್ತುವರಿಯಿಂದ ತೆರವುಗೊಳಿಸಿದ ಭೂಮಿಯನ್ನು ಇತರೆ ಇಲಾಖೆಗಳಿಗೆ ನಿರ್ವಹಣೆಗೆ ವಹಿಸುವುದರೊಂದಿಗೆ ಜಮೀನುಗಳನ್ನು ಕಾಯ್ದಿರಿಸಬೇಕು ಎಂದರು. ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಮಳೆಗಾಲದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುವುದರಿಂದ ಜನರು ಅವುಗಳನ್ನು ದಾಟಲು ಬಳಸಲು ಅನುಕೂಲವಾಗುವಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವಶ್ಯಕತೆಗನುಗುಣವಾಗಿ ಕಾಲು ಸಂಕಗಳ ನಿರ್ಮಾಣವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೊಂದಾಯಿಸಿ ಅದರ ಉಪಯೋಗ ಪಡೆದುಕೊಳ್ಳಲು ಚಿಕಿತ್ಸೆಗೆಗಾಗಿ ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಆರೋಗ್ಯ ಮಿತ್ರ ಸಿಬ್ಬಂದಿಗಳು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು 24*7 ನೀಡಿ ಸಹಕರಿಸಬೇಕು. ಇದಕ್ಕಾಗಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿರುವ ಬೆಡ್‌ಗಳು ಉಪಯುಕ್ತವಾಗುವಂತೆ ಮೆಲ್ವಿಚಾರಣೆ ನಡೆಸಬೇಕು ಎಂದ ಅವರು, ಜನಸಾಮಾನ್ಯರಿಗೆ ಅನುಕೂಲವಾಗಲು ಸಹಾಯವಾಣಿಯನ್ನು ತೆರೆಯಬೇಕೆಂದು ಸಲಹೆ ನೀಡಿದರು. ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಕೈಗೊಂಡಿರುವ ಜಲ ಜೀವನ್ ಮಿಷನ್ ಯೋಜನೆಯಡಿಯ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *