DAKSHINA KANNADA
ನೈಟ್ ಕರ್ಫ್ಯೂ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲು

ಮಂಗಳೂರು, ಆಗಸ್ಟ್ 06: ನಿಷೇಧಾಜ್ಞೆ ಜೊತೆ ನೈಟ್ ಕರ್ಫ್ಯೂ ವೇಳೆ ಕನ್ನಡಕ ಮಾರಾಟದ ಅಂಗಡಿ ತೆರೆದು ಅದನ್ನು ಮುಚ್ಚಲು ಹೇಳಿದ ಪೊಲೀಸ್ ಸಿಬ್ಬಂದಿಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೊರಡಿಸಿದ್ದರು. ಜೊತೆಗೆ ನೈಟ್ ಕರ್ಪ್ಯೂ ಹೇರಿದ್ದರು.

ಈ ಹಿನ್ನೆಲೆಯಲ್ಲಿ ಆ.4 ರಂದು ಸಂಜೆ 6 ಗಂಟೆಗೆ ಉಳ್ಳಾಲ ಠಾಣಾ ಪಿಎಸ್ಐ ರೇವಣ ಸಿದ್ಧಪ್ಪ ಅವರು ಸಿಬ್ಬಂದಿ ರೌಂಡ್ಸ್ ಹೋಗುತ್ತಿದ್ದ ಸಂದರ್ಭ ಸಂಜೆ 6.15ಕ್ಕೆ ಮಾಸ್ತಿಕಟ್ಟೆಯ ಬಳಿಗೆ ತಲುಪಿದಾಗ ಅಲ್ಲಿರುವ EYE TO EYE OPTICALS ಎಂಬ ಕನ್ನಡಕ ಮಾರಾಟದ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಈ ವೇಳೆ ಅದನ್ನು ಮುಚ್ಚುವಂತೆ ತಿಳಿಸಿದಾಗ ಅಲ್ಲಿನ ಸಿಬ್ಬಂದಿ ಉಡಾಫೆ ಮಾತನಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜೊತೆಗೆ ಅಂಗಡಿ ಮಾಲಕ ಶಬೀಲ್ ಅಹಮ್ಮದ್ ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂಬ ದೂರಿನನ್ವಯ ಉಳ್ಳಾಲ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.