LATEST NEWS
ಕೊ*ಲೆಗಳು ಆಗುತ್ತಲೇ ಇರುತ್ತವೆ… ಕೊ*ಲೆಯಾದ ಪ್ರತಿಯೊಬ್ಬರ ಮನೆಗೆ ಸಚಿವರು ಹೋಗಲೇಬೇಕು ಎಂದೇನೂ ಇಲ್ಲ- ದಿನೇಶ್ ಗುಂಡೂರಾವ್

ಮಂಗಳೂರು ಮೇ 10:ಇತ್ತೀಚೆಗೆ ಹತ್ಯೆಯಾದ ಹಿಂದೂ ಕಾರ್ಯಕರ್ತಸ ಸುಹಾಶ್ ಶೆಟ್ಟಿ ಮನೆಗೆ ಉಸ್ತವಾರಿ ಸಚಿವರು ಭೇಟಿ ನೀಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕೊಲೆಗಳು ಆಗುತ್ತಲೇ ಇರುತ್ತವೆ. ಕೊಲೆಯಾದ ಪ್ರತಿಯೊಬ್ಬರ ಮನೆಗೆ ಸಚಿವರು ಹೋಗಲೇಬೇಕು ಎಂದೇನೂ ಇಲ್ಲ. ಕೊಲೆ ಏಕೆ ಆಗಿದೆ ಎಂಬುದೂ ಮುಖ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರನ್ನು ಬಂಧಿಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಿದೆ. ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದರು. ಪೊಲೀಸರು ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದು, ಆರೋಪಿಗಳ ಬಂಧನವಾದ ಹಿನ್ನಲೆ ಈ ಪ್ರಕರಣವನ್ನು ಎನ್ಐಎ ಗೆ ಕೋಡುವ ಅಗತ್ಯವಿಲ್ಲ ಎಂದರು.
ಬಿಜೆಪಿಯವರ ಕಪೋಲಕಲ್ಪಿತ ಆರೋಪಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಊಹಾಪೋಹದ ಹೇಳಿಕೆ ನೀಡುವುದನ್ನು ಬಿಟ್ಟು ಬಿಜೆಪಿಯವರು ತಮ್ಮ ಬಳಿ ಸ್ಪಷ್ಟ ಮಾಹಿತಿ ಇದ್ದರೆ ತಿಳಿಸಲಿ’ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದ್ದು, ಕೆಲವರ ವಿರುದ್ದ ಪೊಲೀಸರು ಕ್ರಮಕೈಗೊಂಡಿದ್ದಾರೆ. ಕೆಲವೊಬ್ಬರು ನಕಲಿ ಹೆಸರಲ್ಲಿ ಖಾತೆ ಬಳಸುತ್ತಿದ್ದು, ಅವರು ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಸಂಬಂಧಿಸಿದ ಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ತಿಳಿದುಕೊಂಡು ಕ್ರಮಕೈಗೊಳ್ಳಲಾಗುತ್ತಿದೆ. ಕೋಮುಪ್ರಚೋದನಕಾರಿ ಹೇಳಿಕೆ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಆಗಬೇಕಾಗುತ್ತದೆ. ಅವರು ಮಾಡಿರುವ ವೈಯಕ್ತಿಕ ಟೀಕೆ ಕೀಳು ಅಭಿರುಚಿಯಿಂದ ಕೂಡಿದೆ. ಅವರ ಮಾತುಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಹೀಗಾಗಿ ಪ್ರತ್ಯುತ್ತರ ಕೊಡುವ ಅವಶ್ಯಕತೆ ಇಲ್ಲ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.