ಕೇರಳ ಡಿಸೆಂಬರ್ 08: ಬಹುಭಾಷಾ ನಟಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮಲೆಯಾಳಂನ ನಟ ದಿಲೀಪ್ ಅವರನ್ನು ಕೇರಳ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ. ಆದರೆ ಈ ಪ್ರಕರಣದಲ್ಲಿ 6 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ.

2017ರಲ್ಲಿ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರ ಕಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ದೂರು ನೀಡಲಾಗಿತ್ತು. ನಟ ದಿಲೀಪ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು
ನಟ ದಿಲೀಪ್ ಅವರನ್ನು ಹೊರತುಪಡಿಸಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ ಮೂವರನ್ನು ಕೂಡ ನಿರಾಪರಾಧಿಗಳು ಎಂದು ಹೈಕೋರ್ಟ್‌ನ ನ್ಯಾ. ಹನಿ ಎಂ ವರ್ಗೀಸ್ ಅವರು ತೀರ್ಪು ನೀಡಿದ್ದಾರೆ.ನಟ ದಿಲೀಪ್ ಅವರು ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.
ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೇರಳ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದು, ಪೊಲೀಸರು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ.
ಇತರ ಆರೋಪಿಗಳ ಸಹಾಯದಿಂದ ಪೊಲೀಸರು ಸುಳ್ಳು ಪ್ರಕರಣವನ್ನು ಸೃಷ್ಟಿಸಿದರು ಮತ್ತು ನಂತರ ಮಾಧ್ಯಮದ ಒಂದು ಭಾಗವನ್ನು ಬಳಸಿಕೊಂಡು ಆ ಕಥೆಯನ್ನು ಪ್ರಚಾರ ಮಾಡಿದರು. ಇಂದು ಆ ಕಥೆ ನ್ಯಾಯಾಲಯದಲ್ಲಿ ಕುಸಿಯಿತು. ಈ ಪ್ರಕರಣದಲ್ಲಿ ನಿಜವಾದ ಪಿತೂರಿ ಎಂದರೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸುವುದು, ನನ್ನ ಸಿನಿಮಾ ವೃತ್ತಿಜೀವನವನ್ನು, ನನ್ನ ಜೀವನವನ್ನು ಹಾಳು ಮಾಡುವುದು” ಎಂದು ಅವರು ಹೇಳಿದರು.
ನನ್ನ ಕುಟುಂಬ ಮತ್ತು ನನ್ನ ಬೆಂಬಲಕ್ಕೆ ನಿಂತ ನನ್ನ ಸ್ನೇಹಿತರಿಗೆ, ನನಗಾಗಿ ಪ್ರಾರ್ಥಿಸಿದವರಿಗೆ ಮತ್ತು ಈ ಪ್ರಕರಣದಲ್ಲಿ ನನ್ನನ್ನು ಸಮರ್ಥಿಸಿಕೊಳ್ಳಲು ಹಗಲಿರುಳು ಶ್ರಮಿಸಿದ ನನ್ನ ವಕೀಲರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಅವರು ಹೇಳಿದರು.



