LATEST NEWS
ದೇಶದ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ರೀತಿಯ ಯಾವುದೇ ವ್ಯವಸ್ಥೆ ಇಲ್ಲ – ಪ್ರಧಾನಿ ಮೋದಿ
ನವದೆಹಲಿ ಅಕ್ಟೋಬರ್ 27: ಕಾನೂನಿನಲ್ಲಿ ಡಿಜಿಟಲ್ ಬಂಧನದಂಥ ಯಾವುದೇ ವ್ಯವಸ್ಥೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಾಸಿಕ ʼಮನ್ ಕಿ ಬಾತ್ʼ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, “ಕಾನೂನಿನಲ್ಲಿ ಡಿಜಿಟಲ್ ಬಂಧನದಂಥ ಯಾವುದೇ ವ್ಯವಸ್ಥೆಯಿಲ್ಲ. ಅದು ಕೇವಲ ವಂಚನೆ, ಮೋಸ, ಸುಳ್ಳಾಗಿದ್ದು, ಇಂತಹ ಕೃತ್ಯವನ್ನು ಮಾಡುತ್ತಿರುವ ಕ್ರಿಮಿನಲ್ ಗಳ ಗುಂಪು ಸಮಾಜದ ಶತ್ರುವಾಗಿದೆ. ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಲು ವಿವಿಧ ತನಿಖಾ ಸಂಸ್ಥೆಗಳು ರಾಜ್ಯ ಸರಕಾರಗಳ ಸಮನ್ವಯದೊಂದಿಗೆ ಕಾರ್ಯಾಚರಿಸುತ್ತಿವೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕದಲ್ಲಿ ನಡೆದ ತನಿಖಾಧಿಕಾರಿಗಳಂತೆ ಸೋಗು ಹಾಕುವ ವಂಚಕರ ಪ್ರಾತಿನಿಧಿಕ ವಿಡಿಯೊವನ್ನು ಪ್ರದರ್ಶಿಸಿದ ಪ್ರಧಾನಿ ಮೋದಿ, “ಡಿಜಿಟಲ್ ಬಂಧನ ವಂಚನೆಗಳ ಕುರಿತು ಎಚ್ಚರದಿಂದಿರಿ. ಇಂತಹ ತನಿಖೆಗೆ ಯಾವುದೇ ತನಿಖಾ ಸಂಸ್ಥೆಯೂ ನಿಮ್ಮನ್ನು ಫೋನ್ ಅಥವಾ ವಿಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ” ಎಂದೂ ಕಿವಿಮಾತು ಹೇಳಿದ್ದಾರೆ. ಇಂತಹ ವಂಚನೆಗಳ ಕುರಿತು ತನಿಖೆ ನಡೆಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳ ನಡುವೆ ಸಮನ್ವಯವೇರ್ಪಡಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.