LATEST NEWS
ದಿಗಂತ್ ನಾಪತ್ತೆಯ ಹಿಂದೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ – ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ದತೆ

ಮಂಗಳೂರು ಮಾರ್ಚ್ 07: ಫರಂಗಿಪೇಟೆಯ ದಿಗಂತ್ ನಿಗೂಢ ನಾಪತ್ತೆಯ ಹಿಂದೆ ಸ್ಥಳೀಯ ಮಾದಕ ವಸ್ತು ದಂಧೆಯ ಕೈವಾಡವಿದೆ ಎನ್ನುವ ಬಲವಾದ ಗುಮಾನಿಯಿದ್ದು ಪೊಲೀಸ್ ಇಲಾಖೆಯ, ಪೊಲೀಸ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಇಂತಹ ಘಟನೆ ನಡೆದಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಅಮ್ಮೆಮಾರ್, ಪುದು, ಫರಂಗಿಪೇಟೆ, ಕಡೆಗೋಳಿ, ಅರ್ಕುಳ ಪರಿಸರದಲ್ಲಿ ಗಾಂಜಾ, ಚರಸ್ ಮತ್ತಿತರ ಮಾದಕ ವಸ್ತುಗಳು ನಿರಾತಂಕವಾಗಿ ಮಾರಾಟವಾಗುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ. ದಿಗಂತ್ ನಾಪತ್ತೆಯಾಗಿ ವಾರ ಕಳೆದರೂ ಪತ್ತೆಯಿಲ್ಲ, ಪೊಲೀಸರು ಹುಡುಕುತ್ತೇವೆ ಹುಡುಕುತ್ತೇವೆ ಎಂದಷ್ಟೇ ಹೇಳುತ್ತಿದ್ದಾರೆ. ಯಾವ ಸ್ಪಷ್ಟತೆಯನ್ನೂ ಕೂಡ ಅಧಿಕಾರಿಗಳು ಕೊಡುತ್ತಿಲ್ಲ. ದಿಗಂತ್ ಪತ್ತೆಗೆ ಆಗ್ರಹಿಸಿ ಮೊನ್ನೆ ನಡೆದ ಫರಂಗಿಪೇಟೆ ಬಂದ್ ಗೆ ಜನ ಜಾತಿ ಮತ ಬೇಧ ಮರೆತು ಬೆಂಬಲ ನೀಡಿದ್ದಾರೆ. ಮಾರ್ಚ್ 10ರಂದು ಮತ್ತೆ ಸಭೆ ಸೇರಿ ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಉಪವಾಸ ಸತ್ಯಾಗ್ರಹ ಸಹಿತ ಹೋರಾಟ ನಡೆಸಲು ನಾವು ಮುಂದಾಗಿದ್ದೇವೆ ಎಂದರು, ವಿಹಿಂಪ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್, ಹಿಂಜಾವೇ ಪ್ರಾಂತ ಪ್ರಮುಖ್ ಕಿಶೋರ್ ಕುಮಾರ್, ಸಂತೋಷ್ ಉಪಸ್ಥಿತರಿದ್ದರು.
