BANTWAL
ಬಂಟ್ವಾಳ – ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ – ಪೊಲೀಸ್ ಔಟ್ ಪೋಸ್ಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಬಂಟ್ವಾಳ ಫೆಬ್ರವರಿ 27: ಪರಂಗಿಪೇಟೆಯ ಕಿದೆಬೆಟ್ಟು ನಿವಾಸಿ ಪಿಯುಸಿ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಪೋಲೀಸ್ ಔಟ್ ಪೋಸ್ಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಪರಂಗಿಪೇಟೆಯ ಕಿದೆಬೆಟ್ಟು ನಿವಾಸಿ ಪಿಯುಸಿ ವಿದ್ಯಾರ್ಥಿಯಾಗಿರುವ ದಿಗಂತ್ ಫೆಬ್ರವರಿ 24 ರ ರಾತ್ರಿಯಿಂದ ನಾಪತ್ತೆಯಾಗಿದ್ದಾನೆ. ಮನೆ ಪಕ್ಕದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ದಿಗಂತ್, ಬಳಿಕ ನಾಪತ್ತೆಯಾಗಿದ್ದ . ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ 24 ಗಂಟೆ ಕಳೆದರೂ ಪೊಲೀಸರು ಯಾವುದೇ ರೀತಿಯ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಇದೀಗ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್ ನೇತ್ರತ್ವದಲ್ಲಿ ವಿಶ್ವಹಿಂದೂ ಪರಿಷತ್ ಪರಂಗಿಪೇಟೆ ಘಟಕದ ವತಿಯಿಂದ ಪರಂಗಿಪೇಟೆ ಹೊರಠಾಣೆಗೆ ಬೇಟಿ ನೀಡಿ ಮನವಿ ಮಾಡಿದ್ದಾರೆ.

ಅದಕ್ಕೂ ಮೊದಲು ಸಂಘಟನೆಯ ಪ್ರಮುಖರು ಫರಂಗಿಪೇಟೆ ವೀರಾಂಜನೇಯ ವ್ಯಾಯಮ ಶಾಲೆಯಲ್ಲಿ ಈ ಬಗ್ಗೆ ವಿಶೇಷ ಸಭೆ ನಡೆಸಿದ್ದಾರೆ. ಬಳಿಕ ಪರಂಗಿಪೇಟೆ ಪೋಲಿಸ್ ಹೊರಠಾಣೆಗೆ ಬೇಟಿ ನೀಡಿದ್ಧಾರೆ. ಪರಂಗಿಪೇಟೆ ಅಮ್ಮೆಮಾರ್ ನಿವಾಸಿಯಾಗಿರುವ ವಿದ್ಯಾರ್ಥಿ ದಿಗಂತ ಕಾಣೆಯಾಗಿ 24 ಗಂಟೆ ಕಳೆದಿದೆ. ಆದರೆ ಈತನ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಪೋಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿಯಿಂದ ಕಾರ್ಯವನ್ನು ಮಾಡಬೇಕಾಗಿದೆ. ಈ ಭಾಗದಲ್ಲಿ ಗಾಂಜಾ ವ್ಯಸನಿಗಳೇ ತುಂಬಿರುವುದರಿಂದ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ.
ವಿದ್ಯಾರ್ಥಿಯ ಪತ್ತೆಗೆ ಶನಿವಾರದವರೆಗೆ ಪೋಲೀಸ್ ಇಲಾಖೆಗೆ ಸಮಯವನ್ನು ನೀಡಿದ ಸಂಘಟನೆಯ ಪ್ರಮುಖರು, ಪತ್ತೆ ಮಾಡದೇ ಹೋದರೆ ಶನಿವಾರ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಠಾಣೆಗೆ ಆಗಮಿಸಿದ ಎಡಿಷನಲ್ ಎಸ್.ಪಿ.ರಾಜೇಂದ್ರ ಅವರು ಸಂಘಟನೆಯವರ ಮನವಿಯನ್ನು ಆಲಿಸಿ, ಶೀಘ್ರವಾಗಿ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಭಾಗದಲ್ಲಿ ಅತೀ ಹೆಚ್ಚಿರುವ ಗಾಂಜಾ ವ್ಯಸನಿಗಳ ಅಟ್ಟಹಾಸ ಇದ್ದು. ಒಬ್ಬಂಟಿಯಾಗಿ ಈ ಭಾಗದಲ್ಲಿ ಜನ ತೆರಳದಷ್ಟು ಮಟ್ಟಿಗೆ ಹೆಚ್ಚಿರುವ ಗಾಂಜಾ ಮಾಫಿಯಾ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬಾಲಕ ದಿಗಂತ್ ನಾಪತ್ತೆ ಹಿಂದೆ ಇದೇ ಗಾಂಜಾ ಮಾಫಿಯಾ ಕೈವಾಡವಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಶನಿವಾರದೊಳಗೆ ಪೋಲೀಸರು ಈ ಪ್ರಕರಣವನ್ನು ಪತ್ತೆಹಚ್ಚಲು ವಿಫಲವಾದರೆ ಪರಂಗಿಪೇಟೆ ಬಂದ್ ನಡೆಸಲು ಹಿಂದೂ ಸಂಘಟನೆಗಳ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ.