LATEST NEWS
ದಿಗಂತ್ ಮನೆ ಬಿಡಲು ಪ್ರಮುಖ ಕಾರಣವೇನು -ತನಿಖೆಯ ಸಂಪೂರ್ಣ ಮಾಹಿತಿ ನೀಡಿದ ಎಸ್ಪಿ

ಮಂಗಳೂರು ಮಾರ್ಚ್ 09: ರಾಜ್ಯಾದ್ಯಂತ ಸುದ್ದಿಯಾಗಿದ್ದ ಪಿಯು ವಿಧ್ಯಾರ್ಥಿ ದಿಗಂತ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಯತೀಶ್ ಮಾಹಿತಿ ನೀಡಿದ್ದು, ಪಿಯುಸಿ ಪರೀಕ್ಷೆಗೆ ಹೆದರಿ ಬಾಲಕ ನಾಪತ್ತೆಯಾಗಿದ್ದ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವಿಫಲವಾಗಿಲ್ಲ. ವಿಧ್ಯಾರ್ಥಿಯನ್ನು ಹುಡುಕಲು ನಾವು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದೇವು ಎಂದು ತಿಳಿಸಿದ್ದಾರೆ.

ಬಾಲಕ ನಾಪತ್ತೆಯಾದ ಬಳಿಕ ಬಂಟ್ವಾಳ ಡಿವೈಎಸ್ ಪಿ ನೇತೃತ್ತದಲ್ಲಿ ಏಳು ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ತಿಳಿಸಿದ್ದಾನೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಹಿನ್ನೆಲೆಯಲ್ಲಿ ಹೆದರಿದ್ದಾಗಿ ದಿಗಂತ್ ಹೇಳಿದ್ದಾನೆ ಎಂದರು.

ಫೆಬ್ರವರಿ 25ರಂದು ಸಂಜೆ ವೇಳೆಗೆ ಮನೆಯಿಂದ ತೆರಳಿದ್ದ ದಿಗಂತ್ ರೈಲು ಹಳಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲನ್ನು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಅರ್ಕುಳದಲ್ಲಿ ಬೈಕ್ ಒಂದರಲ್ಲಿ ಲಿಫ್ಟ್ ಪಡೆದು ಅಲ್ಲಿಂದ ಮಂಗಳೂರಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಮಂಗಳೂರಿನಿಂದ ಶಿವಮೊಗ್ಗ ತೆರಳುವ ಬಸ್ ಹತ್ತಿದ್ದು, ಆನಂತರ ಮೈಸೂರಿಗೆ ಬಸ್ಸಿನಲ್ಲಿ ಹೋಗಿದ್ದಾನೆ. ಅಲ್ಲಿಂದ ಬೆಂಗಳೂರಿನ ಕೆಂಗೇರಿ, ಆಬಳಿಕ ನಂದಿ ಹಿಲ್ಸ್ ತೆರಳಿ ಅಲ್ಲಿನ ರೆಸಾರ್ಟ್ ಒಂದರಲ್ಲಿ ಹಣಕ್ಕಾಗಿ ಕೆಲಸಕ್ಕೆ ಸೇರಿದ್ದಾನೆ. ಮೂರು ದಿನ ಕೆಲಸ ಮಾಡಿ ಸಂಬಳ ಪಡೆದು ಮತ್ತೆ ಮೈಸೂರಿಗೆ ಹೋಗಿದ್ದಾನೆ. ಅಲ್ಲಿಂದ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲು ಹತ್ತಿದ್ದು, ಉಡುಪಿಗೆ ಬಂದು ಇಳಿದಿದ್ದಾನೆ.
ಮನೆಯಿಂದ ಹೋಗುವಾಗ ದಿಗಂತ್ 500 ರೂ ತೆಗೆದುಕೊಂಡು ಹೋಗಿದ್ದಾನೆ. ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೆ ಪ್ರಯಾಣ ಮಾಡಿದ್ದಾನೆ ಎಂದರು. ರೈಲ್ವೇ ಟ್ರ್ಯಾಕ್ ಬಳಿ ರಕ್ತದ ಕಲೆ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ, ಅವನ ಪಾದದಲ್ಲಿ ಗಾಯವಾಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಆತನೇ ಹೇಳಿದ್ದಾನೆ. ಅವನನ್ನು ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದ. ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ಕಲಿಯುವುದರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಮಂಕಾಗಿದ್ದ ಎಂದರು.
ಸದ್ಯ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಹೈಕೋರ್ಟ್ ಹಾಜರುಪಡಿಸಿ ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಅವನನ್ನು ಬೊಂದೇಲ್ ನ ಬಾಲ ಮಂದಿರದಲ್ಲಿ ಇರಿಸಲಾಗಿದೆ ಎಂದು ಎಸ್ ಪಿ ಯತೀಶ್ ಎನ್ ಮಾಹಿತಿ ನೀಡಿದರು.