BELTHANGADI
ಕುಕ್ಕೇಡಿ ಪಟಾಕಿ ತಯಾರಿಕಾ ಘಟಕ ಸ್ಪೋಟ ಪ್ರದೇಶಕ್ಕೆ DIG ಅಮಿತ್ ಸಿಂಗ್ ಭೇಟಿ..!
ಬೆಳ್ತಂಗಡಿ : ಭಾನುವಾರ ನಡೆದ ಭೀಕರ ಸ್ಪೋಟದಲ್ಲಿ ಮೂವರು ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕುಕ್ಕೇಡಿಯ ಪಟಾಕಿ ತಯಾರಿಕಾ ಘಟಕಕ್ಕೆ ಪಶ್ಚಿಮವಲಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಅಮಿತ್ ಸಿಂಗ್ ಭೇಟಿ ನೀಡಿ ಸ್ಪೋಟ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಡಿಐಜಿ ಅಮಿತ್ ಸಿಂಗ್‌ಗೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದರು.
ಇನ್ನು ಘಟನೆಗೆ ಸಂಬಂಧಿಸಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ ಬಿ ಮಾಹಿತಿ ನೀಡಿದ್ದಾರೆ. “ಸಾಲಿಡ್ ಫಯರ್ ವರ್ಕ್ಸ್ ಎಂಬ ಸುಡುಮದ್ದು ತಯಾರಿಕಾ ಘಟಕದ ಮಾಲೀಕರಾಗಿರುವ ಸೈಯ್ಯದ್ ಬಶೀರ್ ಅವರನ್ನು ವಶಕ್ಕೆ ಪಡೆದಿದ್ದೇವೆ. ನಮಗೆ ದೊರೆತಿರುವ ದಾಖಲೆಗಳ ಪ್ರಕಾರ 2011ರಿಂದ ಪಟಾಕಿ ತಯಾರಿಕೆಗೆ ಪರವಾನಗಿ ಪಡೆದುಕೊಂಡಿದ್ದಾರೆ. ಅದನ್ನು ಕಂದಾಯ ಇಲಾಖೆ ನೀಡಿದೆ. 2019ರಲ್ಲಿ ಅದನ್ನು ಮತ್ತೆ ನವೀಕರಿಸಿಕೊಂಡಿದ್ದು, 2022ರಲ್ಲಿ ಅದನ್ನು ಅಧಿಕಾರಿಗಳು ದೃಢೀಕರಣ ಕೂಡ ಮಾಡಿಕೊಂಡಿದ್ದಾರೆ. ಈ ಲೈಸೆನ್ಸ್ 2024ರವರೆಗೂ ಚಾಲ್ತಿಯಲ್ಲಿದೆ ಎಂಬುದು ಗೊತ್ತಾಗಿದೆ. ಯಾವ ಕಾರಣಕ್ಕೆ ಈ ಸ್ಫೋಟ ಆಗಿದೆ ಎಂಬುದರ ಬಗ್ಗೆ ಪತ್ತೆ ಹಚ್ಚುತ್ತೇವೆ” ಎಂದು ತಿಳಿಸಿದ್ದಾರೆ.