DAKSHINA KANNADA
ಅಕ್ರಮ ಮರಳುಗಾರಿಕೆ ಮರೆಮಾಚಲು ಅಫಘಾತದಲ್ಲಿ ಸತ್ತ ವ್ಯಕ್ತಿ ಮೇಲೆಯೇ ದೂರು ದಾಖಲಿಸಿದರೇ ಕಡಬ ಪೋಲೀಸರು ?
ಅಕ್ರಮ ಮರಳುಗಾರಿಕೆ ಮರೆಮಾಚಲು ಅಫಘಾತದಲ್ಲಿ ಸತ್ತ ವ್ಯಕ್ತಿ ಮೇಲೆಯೇ ದೂರು ದಾಖಲಿಸಿದರೇ ಕಡಬ ಪೋಲೀಸರು ?
ಪುತ್ತೂರು ಮಾ.2: ಅಕ್ರಮ ಮರಳು ಸಾಗಾಟದ ಮಿನಿ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಾರ್ಚ್ 1 ರಂದು ನಡೆದಿದೆ.
ಆದರೆ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸುವ ಬದಲು ಮೃತಪಟ್ಟ ವ್ಯಕ್ತಿ ಮೇಲೆಯೇ ಕಡಬ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಮೇಘರಾಜ (32) ಎಂದು ಗುರುತಿಸಲಾಗಿದೆ. ಕಡಬದ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಂಡಿಲ್ಲ, ಲಾರಿ ಮಾಲಕರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ಮೇಘರಾಜ್ ಅವರ ಜೊತೆ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ಕಾರ್ಮಿಕರು ಶವ ಇರಿಸಿದ್ದ ಶವಾಗಾರದ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು.
ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲು ಲಾರಿಯಲ್ಲಿದ್ದ ಮರಳನ್ನು ಅಪಘಾತ ನಡೆದ ಸ್ಥಳದ ಸಮೀಪ ಮನೆಯೊಂದರ ಬಳಿ ಖಾಲಿ ಮಾಡಿ ಲಾರಿಯನ್ನು ಮತ್ತೆ ಅಪಘಾತದ ಸ್ಥಳದಲ್ಲಿ ತಂದಿರಿಸಿದರು ಎಂದು ಸ್ಥಳೀಯರು ದೂರಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪೊಲೀಸರು ಸ್ಥಳಕ್ಕೆ ಬರುವ ಮೊದಲು ಅಪಘಾತಕ್ಕೆ ಕಾರಣವಾಗಿದ್ದ ವಾಹನವನ್ನು ಸ್ಥಳಾಂತರಿಸಿ ಮತ್ತೆ ತಂದಿರಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದಂತಾಗಿದೆ. ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದರೂ ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಮೇಲೆ ಆತನ ತಲೆಯ ಮೇಲೆ ಲಾರಿಯ ಚಕ್ರ ಹರಿದಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಕಡಬ ಪೋಲೀಸರ ಈ ನಡೆ ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.ಪ್ರಕರಣ ಇದೀಗ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಲಾಗಿದೆ.