LATEST NEWS
ದಿನಕ್ಕೊಂದು ಕಥೆ- ಗಾಳಿ
ಗಾಳಿ
ಗಾಳಿ ನನ್ನೊಂದಿಗೆ ಮಾತುಕತೆಗೆ ಸಿಕ್ತಿಲ್ಲ .ಅವನಲ್ಲಿ ಒಂದಷ್ಟು ಮಾಹಿತಿ ಕೇಳಬೇಕಿತ್ತು. ಭೂಮಿಯಲ್ಲಿ ನಿಲ್ಲದೆ, ಬಾನಿನಲ್ಲಿ ಸಲ್ಲದೆ, ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆಯಿಂದ ಚಲಿಸುತ್ತಿರುವ ಕಾರಣ ಮಾತುಕತೆಗೆ ಸಿಕ್ಕಿಲ್ಲ ಅವನು. ದೀಪವಾರಿಸುವ ಗಾಳಿಯನ್ನ ಆಗಾಗ ಬೈಯುತ್ತೇವೆ, ಕೆಲವೊಮ್ಮೆ ಬೆಂಕಿಯ ಜ್ವಾಲೆಯನ್ನು ಮತ್ತಷ್ಟು ಹೆಚ್ಚಿಸುವಾಗಲೂ ಜರಿಯುತ್ತೇವೆ, ದೇಹ ತಂಪು ಕೇಳಿದಾಗ ನಿದಾನ ಬೀಸುವ ಗಾಳಿಯನ್ನ ಮುದ್ದಿಸುತ್ತೇವೆ.
ಗಾಳಿಗೆ ನನ್ನ ಪ್ರಶ್ನೆ ಏನೆಂದರೆ, ಈ ಗಾಳಿ ಚಲಿಸುತ್ತದೆ, ಕರುಣೆಯ ಎಡೆಯಲ್ಲಿ, ಕ್ರೌರ್ಯದ ನಡುವಲ್ಲಿ, ಉದಾರಿ ಜಿಪುಣನ ಮನದಲ್ಲಿ ,ಅಸೂಯೆ, ಮತ್ಸರ ,ವ್ಯಥೆ ,ಸೌಂದರ್ಯ, ವಿಕೃತ ಮನಸ್ಸು, ಮುಗ್ದ ಹೃದಯ ,ಖುಷಿ, ನಿಟ್ಟಿಸಿರು, ಇವೆಲ್ಲವುಗಳ ನಡುವಲ್ಲಿ ಹಾದುಹೋಗುತ್ತದೆ. ಹಿಮಾಲಯದ ತಂಪನಲ್ಲಿ, ಮರುಭೂಮಿಯ ಬಿಸಿಯಲ್ಲಿ, ಕಾಡಿನ ಅಂತರಂಗದಲ್ಲಿ ,
ಬೆಳಕಿನ ಇಂಕಪಿನಲ್ಲಿ, ನೀರಿನ ತಂಪಿನಲ್ಲಿ ಹೀಗೆ ಕಾಲದೇಶಗಳನ್ನು ಮೀರಿ ಚಲಿಸುತ್ತಿರುತ್ತದೆ.
ಆಗ ಗಾಳಿಗೂ ನಮ್ಮೊಂದಿಗೆ ಹೇಳಿಕೊಳ್ಳಲು ಏನಾದರೂ ವಿಚಾರ ಇರಬಹುದಲ್ವಾ , ಅದಕ್ಕೂ ಭಾವನಗಳನ್ನ ವ್ಯಕ್ತಪಡಿಸಲು ಯಾರನ್ನಾದರೂ ಹುಡುಕುತ್ತಿರಬಹುದಲ್ವಾ?ಅದಕ್ಕೂ ಮಾತು ಬಂದಿದ್ದರೆ ,ನಮ್ಮಲ್ಲಿ ಬ್ರಷ್ಟಾಚಾರ, ಭಯೋತ್ಪಾದನೆ ,ಕೆಟ್ಟ ಕೆಲಸ, ಅನಾಚಾರ, ಅತ್ಯಾಚಾರಗಳು ಇರುತ್ತಿರಲಿಲ್ಲವೇನೋ. ದೂರದಲ್ಲಿ ಘಟಿಸುವ ದುಷ್ಟ ಕೆಲಸಗಳನ್ನು ಸಲ್ಲುವವರ ಬಳಿಬಂದು ಉಸುರಿದ್ದರೆ ಎಲ್ಲವನ್ನೂ ಮಟ್ಟ ಹಾಕಬಹುದಿತ್ತು.
ಗಾಳಿಗೆ ಮಾತು ಬರೋದಿಲ್ಲ ಅನ್ನೋದಕ್ಕೆ ಎಲ್ಲವೂ ಸಾರಾಸಗಟಾಗಿ ನಡೆಯುತ್ತಿದೆ ಅನ್ನಿಸುತ್ತಿದೆ. ಕೆಟ್ಟ ಕೆಲಸ ಮಾಡುವವರ ,ದುಷ್ಟ ಯೋಚನೆ ಮಾಡಿದವರ ಒಳಗೆ ನಾನು ಚಲಿಸುವುದಿಲ್ಲ ಎಂದು ಗಾಳಿ ನಿರ್ಧರಿಸಿ ಬಿಟ್ಟಿದ್ದರೆ ಉಸಿರಿಲ್ಲದ ಶವಗಳು ಸಾಲುಸಾಲಾಗಿ ಬಿದ್ದಿರುತ್ತಿದ್ದವು. ಕೆಟ್ಟದ್ದನ್ನ ಯೋಚನೆ ಮಾಡಲು ಜನ ಭಯಪಡುತ್ತಿದ್ದರು. ಗಾಳಿ ನಿನಗೆ ಮಾತು ಬರಬೇಕಿತ್ತು. ಅದಕ್ಕೂ ಒಂದಿಷ್ಟು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯೂ ಬೇಕಿತ್ತು. ಸಮಯ ಸಿಕ್ಕರೆ ಇನ್ನೊಂದಷ್ಟು ಮಾತನಾಡುವುದಿದೆ. ಗಾಳೀ ನನ್ನೊಂದಿಗೆ ಬಂದು ಮಾತನಾಡುತ್ತೀಯಲ್ಲಾ
ಧೀರಜ್ ಬೆಳ್ಳಾರೆ