LATEST NEWS
ದಿನಕ್ಕೊಂದು ಕಥೆ- ಕತೆಯಾದವ
ಕತೆಯಾದವ
ಅವನೇನು ನನಗೆ ಅತಿ ಅಪರಿಚಿತನಲ್ಲ .ಎಲ್ಲೋ ನೋಡಿದ ಹಾಗೆ ಕಾಣಿಸುವ ಮುಖ ಅವನದ್ದು. ನಾ ಕತೆ ಬರೆಯಲು ಆರಂಭಿಸಿದ ದಿನದಂದು ಅದನ್ನು ಓದುತ್ತಿದ್ದನಂತೆ. ಹಾಗಾಗಿ ಸಿಕ್ಕಿದಾಗಲೆಲ್ಲಾ, ವೈಯಕ್ತಿಕ ಭೇಟಿಯಲ್ಲಿ, ಆಥವಾ ಸಂದೇಶದಲ್ಲಿ “ನಂದೂ ಒಂದು ಕಥೆ ಬರೆಯಿರಿ” ಅನ್ನುತ್ತಿದ್ದ. ಏನಾದರೂ ಘಟಿಸಿದ್ದರೆ ನಾನು ಕಥೆಯೊಳಗೆ ಅವನನ್ನ ತರಬಹುದಿತ್ತು. ಅವನು ಏನೇ ಕೇಳಿದರು “ಏನು ಇಲ್ಲ ಮಾಮೂಲಿ ಅನ್ನುತ್ತಿದ್ದ.”
ಅವನೊಳಗಿನ ಕಥೆ ನನಗೆ ಸಿಗಲು ಅವನೊಂದಿಗೆ ಸಮಯ ಕಳೆದು ಕಳೆಯಬೇಕಲ್ಲ. ಅದು ಸಿಗಲಿಲ್ಲ. ಯಾವತ್ತಾದರೂ ಒಂದು ದಿನ ಸಿಗಬಹುದು ಅಂತ ಕಾಯುತ್ತಲಿದ್ದೆ. ನನಗೆ ಮರೆತು ಹೋಗಿಬಿಡುತ್ತಿತ್ತು . ಆತ ಸಂದೇಶ ಕಳುಹಿಸಿ ನೆನಪಿಸುತ್ತಿದ್ದ. ”
ಮಳೆಯ ಸಂಜೆ ಹಲವು ಭಯ ಮತ್ತು ಸಂತಸಗಳನ್ನು ಹುಟ್ಟಿಸುತ್ತಲೇ ಇರುತ್ತದೆ. ಅಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಜೋರಾಗಿತ್ತು.
ಮುಟ್ಟುವ ಆಟದಲ್ಲಿ ಕಳ್ಳನನ್ನ ಒಮ್ಮಿಂದೊಮ್ಮೆಲೆ ಬಂದು ಹಿಡಿಯುವ ಹಾಗೆ ಕರೆಂಟು ಬಂದೇಬಿಡ್ತು. ಅಲ್ಲೊಬ್ಬ ವಿದ್ಯುತ್ ತಂತಿ ತುಂಡಾಗಿ ಕೆಳಕ್ಕೆ ಬಿದ್ದಿರುವುದನ್ನು ಗಮನಿಸದೆ ಹೆಜ್ಜೆ ಇರಿಸಿದ. ತಕ್ಷಣ “——-” ಹೌದು ಖಾಲಿಯಾಯಿತು ಉಸಿರು. ಕಾಲ ಕೆಳಗಿನ ನೆಲವನ್ನು ಗಮನಿಸಬೇಕಾಗಿದೆ” ಇದು ನನ್ನ ಕತೆಯೊಳಗೆ ಬಂದ ಸಾಲು.
ಮರುದಿನದ ಬೆಳಗಿನ ಪತ್ರಿಕೆಯಲ್ಲಿ ನನ್ನ ಕಥೆಯ ಹುಡುಗನ ಮರಣಿಸಿದ ಸುದ್ದಿ ಮೂಲೆಯಲ್ಲಿ ಕಂಡುಬಂತು. ಕಥೆಯೊಳಗೆ ಬಂದದನ್ನ ತಿಳಿಯಬೇಕಾಗಿದ್ದವ ಅರಿವಿಲ್ಲದೇ ಕಥೆಯೊಳಗೆ ಬಂದು ತಿಳಿಯುವ ಮುಂಚೆಯೇ ಕಥೆಯಾಗಿ ಹೋಗಿದ್ದ. ಓ ಕತೆಯ ಹುಡುಗ ಮತ್ತೊಮ್ಮೆ ಬಾ ನಿನ್ನೊಂದಿಗೆ ಕೂತು ನಿನ್ನ ಅರಿವಿಗೆ ಬರುವ ಹಾಗೆ ಕಥೆ ಬರೆಯುತ್ತೇನೆ…
ಆಗಬಹುದಾ….
ಧೀರಜ್ ಬೆಳ್ಳಾರೆ