LATEST NEWS
ದಿನಕ್ಕೊಂದು ಕಥೆ- ದಹನ
ದಹನ
ಕೂಗು ಮಾರ್ದನಿಸುತ್ತಿದೆ .ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ ,ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿಸುವಾಗ ಸಾವಿರಾರು ಆಕ್ರಂದನಗಳು ಒಮ್ಮೆಲೆ ಕಿರುಚಿದರೆ ತಡೆದುಕೊಳ್ಳುವುದು ಹೇಗೆ?.
ಪಕ್ಕದಲ್ಲಿ ಕೇಳಿದ ಆಕ್ರಂದನ ಅಂದರೆ ಮಗ್ಗುಲಲ್ಲಿ. ಆದರೆ ನನ್ನ ಸುತ್ತಮುತ್ತ ನೋವಿನಿಂದ ಕೂಗುವ ಘಟನೆಗಳೇನೂ ಜರುಗಿರಲಿಲ್ಲ ಜರುಗುತ್ತಲೂ ಇರಲಿಲ್ಲ. ನೋವಿನ ಕೂಗು ಮತ್ತೆ ಮತ್ತೆ ಕೇಳುತ್ತಿದೆ .ಕಣ್ಣು ಮುಚ್ಚಿದರೆ ಏನೋ ಹೊಗೆ. ಉಸಿರುಗಟ್ಟಿಸುತ್ತಿದೆ. ಮತ್ತೆ ಕಣ್ಣುಮುಚ್ಚಿದರೆ ಘಟನೆಯೇನೆಂದು ನೋಡಬಹುದು ಎಂದು ಮುಚ್ಚಿದೆ .ಮನಸ್ಸು ನೀಲಾಕಾಶದಲ್ಲಿ ತೇಲಿಸುತ್ತಾ ಸಾಗಿಸುತ್ತಿದೆ .ಹೊಗೆಯಿಂದ ಕಣ್ಣು ನೀರು ಹರಿಸುತ್ತಿದೆ. ಗಂಟಲು ಕಟ್ಟಿದೆ.
ಅಲ್ಲೇ ಕೆಳಗಿಳಿದು ಸಾಗಿದೆ. ಅಲ್ಲಿ ರಣಭೀಕರ ಬೆಂಕಿ ಉಗ್ರರೂಪ ತಾಳಿ ಧಾವಿಸುತ್ತಿದೆ. ಪ್ರಾಣಿಗಳು ಓಡುತ್ತಿವೆ .ಎಲ್ಲವು ದಿಕ್ಕಾಪಾಲಾಗಿ ಜೀವ ಉಳಿದರೆ ಸಾಕೆಂದು . ಕಾಲುಗಳಿಲ್ಲದೆ ಬೇರನ್ನಿಳಿಸಿ ತಲೆಯೆತ್ತಿದ ಮರಗಿಡಗಳು ಅಳುತ್ತಿವೆ. ಕಾಲುಗಳಿಲ್ಲದೆ ಪ್ರಾಣವನ್ನ ವ್ಯರ್ಥವಾಗಿ ಕಳೆದುಕೊಳ್ಳುತ್ತಿರುವುದಕ್ಕೆ.
ಗಮನಿಸುತ್ತಿಲ್ಲ ಯಾರು?. ಜನರಿಗೆ ಸುದ್ದಿಯೂ ತಲುಪಿಲ್ಲ. ನಾನಾದರೂ ತಿಳಿಸೋಣವೆಂದರೆ ಕಣ್ಣು ಕಿವಿಗೂ ಬೇರೇನೂ ಕೆಲಸ ಸಿಕ್ಕಿ ಬಿಟ್ಟಾಗಿದೆ. ದೂರದ ದೇಶದಲಿ ಕಾಡಲಿ ಬೆಂಕಿ ಬಿದ್ದಾಗ ಪಶ್ಚಾತಾಪದ ಮಾತುಗಳು ಮೊಬೈಲ್ ಪರದೆಯಲ್ಲಿ ಕಂಡವರಿಗೆ ,ನನ್ನೂರಿನ ಕಾಡು ಕಾಣಲಿಲ್ಲ .ಇಲ್ಲಿಯ ಗಿಡಮರ ಪ್ರಾಣಿಗಳು ಉಸಿರಿನ ನೋವು
ತಟ್ಟಲಿಲ್ಲ .ಅಡುಗೆ ಮನೆಯಲ್ಲಿ ಬಿಸಿ ಎಣ್ಣೆಯ ಸಣ್ಣ ಬಿಂದು ತಾಗಿದರೆ ನಮಗೆ ಉರಿ ತಡೆಯೋಕೆ ಆಗದಿರುವಾಗ, ಈ ಕಾಡಿನಲ್ಲಿ ಬೆಂಕಿಯ ಕೆನ್ನಾಲಿಗೆಯಲ್ಲಿ ದೇಹ ಧಹಿಸಿದಾಗ ನನ್ನ ಕಾಡಿನ ನೋವು ಹೇಗಿರಬಹುದು .ಒಮ್ಮೆಯಾದರೂ ಯೋಚಿಸಿದ್ದೀರಾ?…..
ಧೀರಜ್ ಬೆಳ್ಳಾರೆ