LATEST NEWS
ದಿನಕ್ಕೊಂದು ಕಥೆ- ಘಟನೆ
ಘಟನೆ
ಘಟನೆಯೊಂದು ಘಟಿಸಿತು. ಊಹಿಸದೇ ಇದ್ದದ್ದು .ಕೆಲದಿನಗಳ ಹಿಂದೆ ಊರು ಮೌನವಾಗಿತ್ತು .ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುಸುಪಿಸು ಮಾತುಗಳಿಂದ ಬೆಳೆದು ಜೈಕಾರ ,ಕಿರುಚಾಟ ,ಜಗಳಗಳ ತಲುಪಿತು. ಅವರಿಗೆ ಮೌನಕ್ಕಿಂತ ಮಾತೇ ಮುಖ್ಯವಾಗಿತ್ತು.
ಆ ದಿನ ವಿಜಯಗಳ ಘೋಷಣೆ. ಕಾರ್ಯಕರ್ತರ ಸಂಭ್ರಮ. ಪಟಾಕಿಗಳ ಸಿಡಿಸಿ ಸೋತವರ ಮುಂದೆ ಅಪಹಾಸ್ಯ. ಅವರ ಮನೆ ಮುಂದೇನೆ ವರ್ಣ ಚಿತ್ತಾರಗಳ ಬೆಳಕಿನೋಕುಳಿ .ಜೈಕಾರದ ಆರ್ಭಟ. ಸಂಭ್ರಮ ಮೇರೆಮೀರಿತು. ಬೇಡಬೇಡವೆಂದರೂ ಹಳೆ ಜೀಪೊಂದರಲ್ಲಿ ಲೆಕ್ಕಕ್ಕಿಂತ ಹೆಚ್ಚು ಜನರನ್ನು ಕೂರಿಸಿ ಊರೊಳಗೆ ಮೆರವಣಿಗೆ.
ಹೋಗಬೇಡವೆಂದ ಜಾಗಕ್ಕೂ ಪಯಣ. ಆ ಏರನ್ನ ಹತ್ತಲು ಜೀಪಿನಿಂದ ಸಾದ್ಯವಿಲ್ಲದಿದ್ದರೂ ವ್ಯರ್ಥ ಪ್ರಯತ್ನ. ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಗಾಡಿ ಚಲಿಸಿತು. ಒಂದಷ್ಟು ಜನ ಹಾರಿದರು, ಆಗದವರು ಒಳಗೆ ಕುಳಿತು ಮರಣಭಯವನ್ನ ಅನುಭವಿಸಿದರು. ಒಂದು ಮರಣ ಹಲವು ಗಾಯದೊಂದಿಗೆ ಜೀಪು ನಜ್ಜುಗುಜ್ಜಾಯಿತು. ನೋಡೋಕೆ ಬಂದ ನಾಯಕರು ಮರಳಿದರು. ಆಸ್ಪತ್ರೆ ಖಾಲಿ ಹೊಡೆಯಿತು. ರೋಗಿಗಳಿಗೆ ಮಾತ್ರ ಅನಗತ್ಯ ಸಂಭ್ರಮದ ಅರಿವಾಗಿತ್ತು. ಕಾಲ ಮಿಂಚಿತ್ತು . ಮರಣಕ್ಕೊಂದು ಬೆಲೆನೂ ಸಿಗಲಿಲ್ಲ.
ಧೀರಜ್ ಬೆಳ್ಳಾರೆ