LATEST NEWS
ದಿನಕ್ಕೊಂದು ಕಥೆ- ಕತೆ ಹೇಳಿದ ಕುದುರೆ
ಕತೆ ಹೇಳಿದ ಕುದುರೆ
ನನ್ನನ್ನಾರು ನೆನಪಿಟ್ಟುಕೊಳ್ಳುತ್ತಾರೆ ? ಇತಿಹಾಸವನ್ನೊಮ್ಮೆ ಕೆದಕಿದರೆ ನೀವು ಹುಬ್ಬೇರಿಸುತ್ತೀರ. ಕಾಡಿನ ನಡುವೆ ಹಸಿರು ಮೇಯುತ್ತಾ ಸ್ವಾಭಿಮಾನಿಯಾಗಿದ್ದ ನನ್ನ ಸಾಕುಪ್ರಾಣಿಯಾಗಿಸಿದವರು ನೀವು. ನನ್ನಾಸೆಯನ್ನು ಮುಷ್ಟಿಯೊಳಗೆ ಇರಿಸಿ ನಿಮ್ಮ ನಡೆಗೆ ಸೇವಕನಾದೆ.
ದಾರಿ ಬಿಟ್ಟು ಬೇರಾವ ಸೌಂದರ್ಯವು ಕಣ್ಣಿಗಿಳಿಯಬಾರದೆಂದು ಪಟ್ಟಿ ಕಟ್ಟಿದಿರಿ. ನನ್ನುಗುರು ಸವೆಯದಿರಲು ಲಾಳ ಬಡಿಯಲಾಯಿತು. ಸ್ವಾತಂತ್ರ್ಯವ ಹುಡುಕುತ್ತಿದ್ದೇನೆ. ನಿಮ್ಮ ಪೌರುಷ ಆಕ್ರಮಣಗಳ ಸಾಧ್ಯತೆಗೆ ನಾನು ಬಲಿ. ನನ್ನ ಮೇಲಿನ ಸವಾರಿ ನಿಮಗೆ ಮಜವಾದರೂ ,ನನ್ನೊಳಗಿನ ನೋವು?.
ನೀವಿಳಿಯುವಿರಿ ಅನ್ನೋ ಧಾವಂತದಿಂದ ಬೇಗ ಗುರಿಮುಟ್ಟಿ ಉಸಿರು ಬಿಡುತ್ತಿದ್ದೆ. ಎಲ್ಲವೂ ನಿಮ್ಮ ಅಡಿಯಾಳಾಗಬೇಕು, ಇದು ನಿಮ್ಮೊಳಗಿನ ಸ್ವಾರ್ಥ ,ಇರಲಿ .ನನಗೂ ಒಂದು ಬದುಕಿದೆ. ನಿಮ್ಮ ಜೂಜಿಗೆ ನಾ ಯಾಕೆ ಭಾಗಿಯಾಗಲಿ. ಇಷ್ಟೆಲ್ಲ ಮಾತಾಡಲು ಸಮಯ ಸಿಕ್ಕಿದ್ದೇ ದೊಡ್ಡದು. ಯಜಮಾನ ಒಳಗಿದ್ದಾನೆ. ನಾ ನೆರಳಲ್ಲಿ ಒರಗಿದ್ದೇನೆ .ಮತ್ತೆ ಸವಾರಿಗೆ ಎಲ್ಲಿಗೂ… ನಿಲ್ಲುವುದೆಲ್ಲೋ…..
ಧೀರಜ್ ಬೆಳ್ಳಾರೆ