LATEST NEWS
ದಿನಕ್ಕೊಂದು ಕಥೆ- ಊರುನ ಭಯ
ಊರುನ ಭಯ
ನನ್ನ ನೋವು ನಿಮಗೆ ಹೇಗೆ ತಿಳಿಯೋಕೆ ಸಾಧ್ಯ. ಒಂದು ಕ್ಷಣ ನಮ್ಮೂರಿನ ಚಿತ್ರ ನಿಮಗೆ ಘಾಸಿ ಮಾಡಬಹುದು ,ನಿಮ್ಮನ್ನ ಮೌನಿಯಾಗಿಸಬಹುದು ,ಆದರೆ ದಿನವೂ ಅಲ್ಲವಲ್ಲ. ನಾವೀಗ ಊರು ಬಿಡಬೇಕಾಗಿದೆ. ಮಾತಿಗೆ ಕನಿಕರಕ್ಕೆ ಬೆಲೆ ಇಲ್ಲ. ಗುಂಡುಗಳು ಮಾತನಾಡುತ್ತಿವೆ. ಅವರಿಗೆ ನಾವು ಬಳಕೆಯಾಗುತ್ತಿದ್ದೇವೆ.
ನಮ್ಮೂರಿನಲ್ಲಿ ಅಜ್ಞಾತವಾಗಿದ್ದವರು ಶಕ್ತಿ ಪಡೆದು ವಿಜೃಂಭಿಸಿದ್ದಾರೆ. ನಾವು ಅವರ ತೀಟೆಗೆ ಮಾರಾಟವಾದೆವು.ಅವರಿಗೆ ಕನಿಕರ ಎಂಬುದಿಲ್ಲ. ಅವರ ಕೈಯಲ್ಲಿರುವ ಬಂಧೂಕು ಅದರೊಳಗಿನ ಗುಂಡಿಗೆ ಎದುರಿನಲ್ಲಿರುವ ವ್ಯಕ್ತಿಯ ಮನದ ಯಾತನೆ ವಯಸ್ಸು ಹೇಗೆ ಅರಿವಿಗೆ ಬರುವುದು. ಗುಂಡು ರಕ್ತವನ್ನು ಹುಡುಕುತ್ತಾ ಸಿಕ್ಕಲ್ಲಿ ನುಗ್ಗುತ್ತಿದೆ.
ಹಸುಳೆಯೋ, ಬಾಣಂತಿಯೋ, ಯುವಕನೋ, ಮುದುಕನೋ ಸಾವಿಗೆ ಇದು ಭರ್ಜರಿ ಭೋಜನ. ವಿಮಾನಗಳು ತುಂಬಿಕೊಂಡು ಊರು ಬಿಡುತ್ತಿವೆ. ನಾ ಬೆಳೆಸಿದ ಮರಗಿಡ ,ನನ್ನ ಮನೆಯ ನಾಯಿ, ದನ ,ಆಡು ನನ್ನ ಶಾಲೆಯ ಪುಸ್ತಕ ಎಲ್ಲವನ್ನು ಬಿಟ್ಟು ಬರಲೇಬೇಕು. ಊರಲ್ಲಿ ಬದುಕುವ ಹಕ್ಕಿಲ್ಲ.
ಅವರಿಗೆ ದಾಸರಾದರೆ ಮಾತ್ರ ಉಳಿಗಾಲ. ಶತಮಾನಗಳ ಹಿಂದಿನ ಇತಿಹಾಸ ಹೇಳುತ್ತಿತ್ತು ಕ್ರೂರತೆಯನ್ನು. ಈಗ ಕಣ್ಣ ಮುಂದೆ ಕಾಣುತ್ತಿದೆ. ನೋವು ಕೊಟ್ಟವರೆಲ್ಲ ಹೂತು ಹೋಗಲಿ , ಊರಿಡೀ ಪೂರ್ತಿ ಬೂದಿಯಾಗಲಿ, ಕಣ್ಣೀರು ಇಳಿದರೂ ಗುಂಡು ಹಾರುತ್ತದೆ. ನರಕ ಅನುಭವಿಸುವುದಕ್ಕಿಂತ ಕ್ಷಣದ ಸಾವೇ ಇಷ್ಟವಾಗುತ್ತಿದೆ .ಊರು ಭಯ ಹುಟ್ಟಿಸಿದೆ …
ಧೀರಜ್ ಬೆಳ್ಳಾರೆ