LATEST NEWS
ದಿನಕ್ಕೊಂದು ಕಥೆ- ಸಿಗಬೇಕಾಗಿದೆ
ಸಿಗಬೇಕಾಗಿದೆ
“ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ” ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ .
ಈ ಸಲ ಯಾವುದಾದರೂ ಆಯಿತು ಒಟ್ಟಿನಲ್ಲಿ ಸೇನೆ ಸೇರಲೇಬೇಕು ಎನ್ನುವ ಆಸೆ ಮತ್ತೆ ನೆನಪಾಯಿತು.ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಸೇನೆಗೂ ಸೇರಿದ. ಅಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ,ಪ್ರತಿದಿನವೂ ಹೊಸ ತರದಂತೆ ಉತ್ಸಾಹದಿಂದ 12 ನೇ ವರ್ಷಕ್ಕೆ ನಿವೃತ್ತಿಯೊಂದಿಗೆ ಊರಿಗೆ ಮರಳಿದ. ಕಾಲಘಟ್ಟವೇ ಹಾಗಿತ್ತು. ಸೈನಿಕರಿಗೆ ತಲುಪಬೇಕಾದದ್ದು ತಲುಪುತ್ತಲೇ ಇಲ್ಲ .ಗುಡಿಸಲಿನಿಂದ ಗಡಿಯವರೆಗೆ ಸಾಗಿ ಮತ್ತೆ ಗುಡಿಸಲಿಗೆ ತಲುಪಿದ. ಪ್ರಾಣ ಪಣಕ್ಕಿಟ್ಟವಿಂದು ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಬಂತು.
ಶತ್ರುಗಳ ಗುಂಡಿಗೆ ಎದೆಯೊಡ್ಡಿದವ ಸರಕಾರದ ಸವಲತ್ತಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯನೀರು ಮನೆಯೊಳಗೆ ಹನಿಯುತ್ತಿದೆ ,ಮಲಗಿದವನಿಗೆ ಆಗಸದಲ್ಲಿ ನಕ್ಷತ್ರಗಳು ನಗುವುದು ಕಾಣಿಸುತ್ತಿದೆ .ದುಡಿಮೆಯ ಶಕ್ತಿ ರಟ್ಟೆಯಲ್ಲಿಲ್ಲ. ದೇಶಸೇವೆ ಮಾಡಿದವನಿಗೆ ದುಡಿಮೆಯ ಸಾಕ್ಷಿ ನೀಡಿದರೆ ಮಾತ್ರ ಹಣಸಂದಾಯ ಎನ್ನುತ್ತಿದೆ ಕಛೇರಿ. ಆತನ ನೋವು ಇಷ್ಟೇ, ದೇಶ ಕಾಯುವಾಗ ಮಳೆ ಚಳಿ ಬಿಸಿಲು ಯಾವುದೂ ನೋವೆನಿಸಲಿಲ್ಲ.
ಇಂದು ಸುಕ್ಕುಗಟ್ಟಿದ ದೇಹವನ್ನೇ ಹೊತ್ತು ಸರಕಾರಿ ಕಚೇರಿಯ ಅಲೆದಾಡುವ ವಿಧಿ ಇದಿಯಲ್ಲಾ ಅದು ಯಾವ ಶತ್ರುವಿಗೂ ಬೇಡ .ನನ್ನ ದುಡಿಮೆಗೆ ಒಂದಿಷ್ಟು ಗೌರವ, ನನ್ನ ಪಾಲಿನ ಹಣ ನನಗೆ ತಲುಪಿಸಿ ಇಷ್ಟು ಸಾಕು ಎಂದು ಕೈ ಮುಗಿಯುತ್ತಾನೆ. ಮನೆಯೊಳಕ್ಕೆ ಕಂಬಕ್ಕೆ ತೂಗು ಹಾಕಿದ್ದ ಭಾರತಾಂಬೆಯ ಭಾವಚಿತ್ರ ನೀರಿನಲ್ಲಿ ತೊಯ್ದುದನ್ನು ಒರೆಸುತ್ತಿದ್ದಾನೆ. ಆತನಿಗೆ ಗೌರವ ಇನ್ನೂ ಇದೆ.ತಲುಪಬೇಕಾದ್ದು ತಲುಪಿದರೆ ಗೌರವ ಉಳಿದೀತೂ….
ಧೀರಜ್ ಬೆಳ್ಳಾರೆ