LATEST NEWS
ದಿನಕ್ಕೊಂದು ಕಥೆ- ಶರೀಪಜ್ಜ
ಶರೀಪಜ್ಜ
ಮಳೆ ಸುರಿಯೋಕೆ ಆರಂಭವಾಗಬೇಕು. ಊರ ಹೊಳೆ ಕೆಂಪು ಬಣ್ಣಕ್ಕೆ ತಿರುಗುಬೇಕು. ಹೊಳೆಯಲಿ ಹರಿಯುವ ನೀರು ಕೆಲವಾರು ತೋಟಗಳಿಗೆ ನುಗ್ಗಿ ಹರಿಯೋಕೆ ಆರಂಭವಾಗಬೇಕು. ಆಗ ನಮ್ಮೂರ ಶರೀಫಜ್ಜನಿಗೆ ಹುಮ್ಮಸ್ಸು.
ನಮ್ಮೂರನ್ನು ಸಂಪರ್ಕಿಸುವ ಸಣ್ಣ ಸೇತುವೆ ಮೇಲೆ ನಿಂತು ಉದ್ದವಾದ ಬಿದಿರಿನ ಕೋಲಿಗೆ ತುದಿಯಲ್ಲಿ ಸಣ್ಣ ವೃತ್ತಾಕಾರವಾದ ತಂತಿಯನ್ನು ಬಿಗಿದು ಅದಕ್ಕೆ ಬಲೆಯನ್ನು ಕಟ್ಟಿ ಹಿಡಿದುಕೊಂಡು ನಿಲ್ಲುತ್ತಾರೆ. ಮಳೆಯಲ್ಲಿ ನೆನೆಯುತ್ತ ಹಾಗೆ ನಿಂತಿರುವ ಅಜ್ಜ ತನ್ನ ಬೇಟೆಗೆ ಕಾಯುತ್ತಿರುತ್ತಾರೆ. ತೋಟಗಳಿಗೆ ನುಗ್ಗಿ ಬರುವ ಬರುವ ನೀರು ಬರುವಾಗ ಅಡಿಕೆ, ತೆಂಗಿನಕಾಯಿ, ಒಂದಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಜೊತೆಗೆ ಬೇರೆ ಬೇರೆ ವಸ್ತುಗಳನ್ನು ಅಜ್ಜನಿಗೆಂದೇ ಹೊತ್ತು ತರುತ್ತದೆ. ಅವರು ಸೇತುವೆ ಮೇಲೆ ಬಂದು ನಿಂತು ನದಿಯೊಂದಿಗೆ ಮಾತನಾಡಲಾರಂಭಿಸುತ್ತಾರೆ.
“ಇವತ್ತು ಏನಿಲ್ವಾ? ಯಾಕೆ ಮೇಲಿನ ತೋಟಗಳಿಗೆ ನುಗ್ಗಿ ಬರೋಕಾಗಲ್ವಾ? ನನಗೆ ಈ ತಿಂಗಳ ಬದುಕು ಹೇಗೆ ?”ಅನ್ನುವಾಗಲೇ ನದಿಗೆ ಮಾತು ಕೇಳಿಸಿ ಸಂದೇಶವನ್ನು ಹಿಮ್ಮುಖವಾಗಿ ಸಾಗಿಸುತ್ತಿತ್ತು. ನೀರಿನಲ್ಲಿ ಮುಳುಗಿ ತೇಲುತ್ತಾ ಕಣ್ಣಾಮುಚ್ಚಾಲೆ ಆಡುತ್ತಾ ಬರುವ ತೆಂಗಿನಕಾಯಿ, ಅಡಿಕೆ ಸಣ್ಣ ಪ್ಲಾಸ್ಟಿಕ್ ಬಾಟಲಿಗಳು ಎಲ್ಲವೂ ಶರೀಫಜ್ಜನ ಕಣ್ಣು ತಪ್ಪಿಸಿ ದಾಟುವುದೇ ಇಲ್ಲ .
ಅಜ್ಜ ಸೇತುವೆ ಮೇಲೆ ಇದ್ದಾರೆಂದರೆ ಮುಂದಿನ ಸೇತುವೆ ಮೇಲೆ ನಿಂತವ ಖಾಲಿ ಕೈಯಲ್ಲಿ ಹಿಂದಿರುಗಲೇ ಬೇಕು. ಈಗ ಅಜ್ಜನಿಗೆ ವಯಸ್ಸಾಗಿದೆ .ತುಂಬಿ ಹರಿಯುವ ಹೊಳೆ ಸಣ್ಣದಾಗಿದೆ. ಅದಕ್ಕೆ ಶರೀಪಜ್ಜನ ವೃದ್ಧಾಪ್ಯದ ಬಗ್ಗೆ ಅರಿವಿರಬೇಕು. ಮೊದಲಿದ್ದ ಉತ್ಸಾಹ ಇಲ್ಲ ಇಬ್ಬರಿಗೂ. ಮಣ್ಣನ್ನು ಕರಗಿಸಿ ಹೊತ್ತೊಯ್ಯುತ್ತಿರುತ್ತದೆ ಅಷ್ಟೇ. ಈಗ ಸೇತುವೆಯಿದೆ ,ನೀರಿದೆ, ಮಳೆ ಇದೆ ಆದರೆ ಮಾತನಾಡಲು ಅಜ್ಜನಿಲ್ಲವಷ್ಟೆ, ನದಿಯೂ ಬೇಸರಗೊಂಡಿಗೆ. ಕೆಂಪು ಕಣ್ಣೀರಿನೊಂದಿಗೆ ಸಾಗುತ್ತಿದೆ
ಧೀರಜ್ ಬೆಳ್ಳಾರೆ