LATEST NEWS
ದಿನಕ್ಕೊಂದು ಕಥೆ- ಮೀರಬೇಕು
ಮೀರಬೇಕು
ಅಮ್ಮನಿಗೆ ಮುಸುಂಬಿ ಅಂದರೆ ತುಂಬಾ ಇಷ್ಟ .ಅದಕ್ಕೆ ಸಿಕ್ಕ ಅಂಗಡಿಯೆಲ್ಲಾ ಹುಡುಕಾಡಿ ಕೊನೆಗೆ ಮೂಲೆಮನೆ ಅಂಗಡಿಯಲ್ಲಿ ಇದ್ದ ಒಂದೇ ಒಂದು ಮೂಸುಂಬಿ ಪಡೆದು ಹೊರಟೆ. ಹಾ ನಾನು ಹೇಳೋಕೆ ಮರೆತಿದ್ದೆ. ನಾನು ಮನೆಗೆ ಹೋಗದೇ ಒಂದು ವರ್ಷವೇ ಆಗಿತ್ತು .
ಮನೆಗೊಂದಿಷ್ಟು ದೂರವಿದೆ ಎನ್ನುವಾಗ ನನಗೊಬ್ಬ ಕಂಡ. ಹಸಿವೆಯೇ ನನ್ನಲ್ಲಿ ಮಾತನಾಡುತ್ತಿದೆ ಅನ್ನಿಸುವಂತಹ ದೃಶ್ಯವದು. ನನ್ನ ಬಳಿ ಹಣ್ಣು ಇರುವ ವಿಚಾರ ಅವನಿಗೆ ಗೊತ್ತಿಲ್ಲ .ಸುತ್ತಮುತ್ತಲು ಯಾವುದೇ ಅಂಗಡಿಯೂ ಇಲ್ಲ. ಅವನಿಗೆ ಎದ್ದು ನಡೆಯುವ ಶಕ್ತಿಯೂ ಇಲ್ಲ. ನನ್ನಮ್ಮನಿಗೆ ಕೊಡಬೇಕಾದ ಮುಸುಂಬಿ ಇವನಿಗೆ ಕೊಡಲು ಮನಸ್ಸಿಲ್ಲ.
ಅಮ್ಮ ಮುಸುಂಬಿ ತಿನ್ನುವಾಗ ಆಗುವ ಖುಷಿಯನ್ನು ನಾನು ನೋಡಬೇಕು.ಇವನ ಭಾವನೆ ನನಗೆ ತಿಳಿಯದು. ಅವನಿಗೆ ಒಂದೆರಡು ಕಾಸುಕೊಟ್ಟು ಮನೆಗೆ ನಡೆದೆ.
ಅಮ್ಮನಿಗೆ ಮುಸುಂಬಿ ನೀಡಿದಾಗ ಅಮ್ಮನ ಖುಷಿ ಕಣ್ಣಲ್ಲಿ ಕಾಣುತ್ತಿತ್ತು .ರಾತ್ರಿ ಮಲಗುವಾಗ ಯೋಚನೆಯೊಂದು ಎದ್ದಿತು. ನಾನು ಆ ಹಸಿವಾದವನಿಗೆ ಹಣ್ಣು ನೀಡಿದ್ದರೆ ನನಗಿನ್ನೂ ಹೆಚ್ಚು ಸಂತೋಷ ಸಿಗುತ್ತಿತ್ತು . ಆ ಹಣ್ಣು ಅವನ ಹಕ್ಕು ಅನ್ನಿಸಿತು. ನಾನು ಕನ್ನಡ ಮೇಷ್ಟ್ರು “ಇವನಮ್ಮವ ಇವನಮ್ಮವ” ಎಂದು ತರಗತಿಯಲ್ಲಿ ಹೇಳುತ್ತೇನೆ .ಹಾಗೆ ನಡೆದುಕೊಳ್ಳದೇ ಇದ್ದದ್ದಕ್ಕೆ ಬೇಸರವಾಯಿತು.
ನಮ್ಮ ಆತ್ಮೀಯರಿಗೆ ಅಗತ್ಯವಿಲ್ಲದಿದ್ದರೂ ಅವರ ಕ್ಷಣದ ಖುಷಿಗೆ ಏನಾದರೂ ನೀಡುವ ನಾವು ಅಪರಿಚಿತನಿಗೂ ಅಗತ್ಯವಿದ್ದಾಗ ಏನಾದ್ರೂ ನೀಡಿದರೆ ಒಳ್ಳೇದಲ್ವಾ?. ಸಮಯ ಮೀರಿದ ಮೇಲೆ ಸಹಾಯಮಾಡಿ ಪ್ರಯೋಜನವೇನು ? ಕೆಲವೊಮ್ಮೆ ಮೀರಲೇಬೇಕು ನಮ್ಮವರಿಗೆ ಮಾತ್ರ ಅನ್ನುವ ಭಾವನೆಯನ್ನು ಕೂಡ ಅಲ್ವಾ….
ಧೀರಜ್ ಬೆಳ್ಳಾರೆ