LATEST NEWS
ದಿನಕ್ಕೊಂದು ಕಥೆ- ಬದುಕಿನ ರಂಗೋಲಿ
ಬದುಕಿನ ರಂಗೋಲಿ
ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ .ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ. ಆದರೆ ಅದರಲ್ಲಿರುವ ಹಿರಿಯ ಜೀವವೊಂದು ಮನೆಯೊಳಗಿದ್ದರೆ ಉಳಿದವರೆಲ್ಲ ದೊಡ್ಡ ಕೆಲಸಕ್ಕೆ ದೊಡ್ಡ ಊರಲ್ಲಿ ನೆಲೆಯಾಗಿದ್ದಾರೆ.
ಆ ಕಡೆಯಿಂದ ಯಾವ ಕರೆಯೂ ಬರುವುದಿಲ್ಲ, ಹೇಗಿದ್ದೀರಿ ಅನ್ನುವ ಮಾತು ಇಲ್ಲ. ಈ ಮನೆಯ ಅಜ್ಜಿ ದಿನವೂ ಅಂಗಳ ಗುಡಿಸುತ್ತಾರೆ, ಚೆಂದದ ರಂಗೋಲಿ ಬಿಡಿಸುತ್ತಾರೆ. ದಿನಕ್ಕೊಂದು ಚಿತ್ತಾರದಿ ಅದು ಕಂಗೊಳಿಸುತ್ತದೆ. ಮಾತನಾಡಲು ಬರುವ ಪಕ್ಷಿಗಳಿಗೆ ಕಾಳು ಹಾಕುತ್ತಾರೆ. ಅಡುಗೆ ಮನೆಯಲ್ಲಿ ಬಗೆ ಬಗೆಯ ಪರಿಮಳ ದಿನವೂ ಓಡಾಡುತ್ತಿರುತ್ತದೆ., ದಿನಕ್ಕೊಮ್ಮೆ ತೋಟದ ಕಡೆಗೆ ಹೋಗಿ ಅಡ್ಡಾಡಿ ಬರುತ್ತಾರೆ.
ಮನೆಯ ಯಾವ ಭಾಗವು ಸೋರುತ್ತಿಲ್ಲ. ಧೂಳು ಹಿಡಿದಿಲ್ಲ, ಜೇಡ ಬಲೆಯನ್ನ ಕಟ್ಟಿಲ್ಲ. ಹೊಸತರಂತೆ ಕಂಗೊಳಿಸುತ್ತಿದೆ . ಅಜ್ಜಿ ನೋವಿನಿಂದ ಒಂದು ದಿನವೂ ಗೋಡೆಗೆ ಒರಗಿಲ್ಲ. ನನ್ನವರು ವಿಚಾರಿಸುವುದಿಲ್ಲ ಎಂಬ ಅಳುವಿಲ್ಲ.ಎದೆಯ ಮಾತನ್ನು ಕೇಳುವವರಿಲ್ಲ ಎಂಬ ಚಿಂತೆಯಿಲ್ಲ. ಬಿಟ್ಟು ಬದುಕೋದನ್ನ ಕಲಿ ಅನ್ನೋದನ್ನ ಆಗಾಗ ಮನೆಯ ಬಳಿ ಬರೋರಿಗೆ ತಿಳಿ ಹೇಳುತ್ತಿರುತ್ತಾರೆ. ನನ್ನ ಬದುಕಿನ ಚಿತ್ತಾರವನ್ನ ನಾನೇ ಬಿಡಿಸಬೇಕು ಆಗ ಬದುಕು ಸುಂದರವಾಗುತ್ತದೆ .ನೋಡುವ ನೋಟದಲ್ಲಿ ಎಲ್ಲ ಇದೆ ಮಗೂ ಅನ್ನುತ್ತಾ ಅಜ್ಜಿ ಈ ದಿನದ ರಂಗೋಲಿ ಬಿಡಿಸೋಕೆ ಅಂಗಳಕ್ಕೆ ನಡೆದರು. ಬದುಕಿನ ರಂಗೋಲಿ ಅದ್ಭುತವಾಗಿದೆ
ಧೀರಜ್ ಬೆಳ್ಳಾರೆ