Connect with us

LATEST NEWS

ದಿನಕ್ಕೊಂದು ಕಥೆ- ಹೊಳೆ

ಹೊಳೆ

ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ ಮಳೆ ಭಯವನ್ನು ಹುಟ್ಟಿಸಿದರು ಹೊಳೆಯ ಬದಿಯ ಮರವೊಂದು ಕುಣಿದಾಡುತಿತ್ತು. ಆ ಮರದ ಕುಣಿತಕ್ಕೆ ಕಾರಣ ಕುಡಿಯೋಕೆ ನೀರು ಸಿಗುತ್ತೆ ಅಂತಲ್ಲ.

ತನ್ನ ಪ್ರೀತಿಯ ಗೆಳತಿಯ ಸಂದೇಶ ತನಗೆ ತಲುಪುತ್ತದಲ್ಲಾ ಎಂದು. ಇಲ್ಲಿ ಹೊಳೆಯ ಬದಿಯಲ್ಲಿನ ಎರಡು ಮರಗಳಿಗೆ ಪರಸ್ಪರ ಬೇರಿನಲ್ಲಿ ಪ್ರೀತಿಸಿ ಮಾತನಾಡಲು ನೀರು ಬೇಕು. ನೀರು ಹರಿದಾಗ ಬೇರನ್ನು ನೀರಿನಲ್ಲಿ ತೇಲಿಸಿ ತನ್ನ ಮುಂದಿರುವ ಗೆಳತಿಯೊಂದಿಗೆ ಸಲ್ಲಾಪವನ್ನು ನಡೆಸಬಹುದು. ಮಳೆ ನಿಂತು ನೀರು ಕಡಿಮೆಯಾದಾಗ ಇಬ್ಬರಲ್ಲೂ ಅಗಲುವಿಕೆಯ ಯಾತನೆ ಆರಂಭವಾಗುತ್ತದೆ.

ಇವರಿಬ್ಬರ ಪ್ರೀತಿಯನ್ನು ಸಾಧ್ಯವಾದಷ್ಟು ಗಟ್ಟಿಯಾಗಿ ನಿಲ್ಲಿಸಲು ಆ ಹೊಳೆ ಪ್ರಯತ್ನಿಸುತ್ತದೆ. ಅದು ನಿಂತಲ್ಲಿ ನಿಲ್ಲೋಕಾಗಲ್ಲ.ಚಲಿಸಲೇಬೇಕು. ನಿಂತರೆ ಕೊಳೆಯುತ್ತೇನೆ ಎನ್ನುವ ಭಯವಿದೆ ಅದಕ್ಕೆ. ಆ ಹೊಳೆ ಇಲ್ಲಿಗೆ ತಲುಪುವ ಮೊದಲು ಹಲವು ಅಡೆತಡೆಗಳನ್ನು ದಾಟಿ, ನುಗ್ಗಿ, ಸೀಳಿ ಧುಮುಕಿ ಇಲ್ಲಿಗೆ ತಲುಪಿದೆ. ಮುಂದೆಯೂ ಕಠಿಣ ಹಾದಿಗಳನ್ನು ದಾಟಲೇಬೇಕು.ಈ ಹೊಳೆಗೆ ಇದೊಂದೇ ಪ್ರೇಮಕಥೆಯಲ್ಲ.

ಇಂತಹ ಹಲವು ಬದುಕನ್ನ ಜೀವಂತವಾಗಿರಿಸಿದೆ. ಎಲ್ಲರನ್ನು ಸಮಾನವಾಗಿ ಕಾಣುತ್ತಾ ಹರಿಯುತ್ತದೆ. ಹೊಳೆಯಂತಹ ಹರಿವು ನಮ್ಮೊಳಗಿದ್ದರೆ ಒಂದಷ್ಟು ಜನರಿಗೆ ಒಳಿತು ಮಾಡಿ ನಮ್ಮ ಗುರಿಯನ್ನು ಸುಲಭವಾಗಿ ಮುಟ್ಟಬಹುದಿತ್ತು. ಹೊಳೆಯ ನೀರು ಕಡಲನ್ನು ಅಪ್ಪುವಂತೆ ಅಲ್ವಾ ?….

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *