LATEST NEWS
ದಿನಕ್ಕೊಂದು ಕಥೆ- ಹೆಸರಿಲ್ಲದ ಊರು
ಹೆಸರಿಲ್ಲದ ಊರು
ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ ,ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು,ಜೊತೆಗೆ ಜನರ ಬಾಯಲ್ಲಿ ಆಗಾಗ ಹರಿದಾಡುತ್ತದೆ ನಮ್ಮ ಹೆಸರು. ಆದರೆ ಆ ಊರಿನ ಜನರಿಗೆ ಹೆಸರು ಇಲ್ಲವೇನೋ ಅನ್ನುವ ಜೀವನ ಅವರದು.
ದೊಡ್ಡ ಕಟ್ಟಡದ ಕೆಲಸದಲ್ಲಿ ಸಣ್ಣ ಜಲ್ಲಿಗಳನ್ನು ಸುರಿಯುವುದು, ದೊಡ್ಡ ಕಲ್ಲುಗಳನ್ನು ಎತ್ತಿ ಜೋಡಿಸುವುದು, ಸಿಮೆಂಟು ಹೊರುವುದು, ಯಾವುದೋ ರಸ್ತೆಗೆ ಡಾಂಬರು ಸುರಿಯೋದು, ಇನ್ನೊಂದಷ್ಟು ಮೂಟೆ ಎತ್ತೋದು, ಯಾವುದೋ ಚರಂಡಿ ಸ್ವಚ್ಛಮಾಡುವುದು, ಕಸ ಎತ್ತುವುದು ಹೀಗೆ ಕೆಲಸಗಳು ಸಾಗುತ್ತವೆ. ಅವರನ್ನು ಯಾವ ಹೆಸರಿನಿಂದ ಕರೆದರೂ ಈ ಹೆಸರು ನನ್ನದಲ್ಲ ಇದೇ ಹೆಸರಿನಿಂದ ಕರೆಯಿರಿ ಅಂತ ಅವರು ಹೇಳುವುದಿಲ್ಲ.
ಅವರಿಗೆ ಹೆಸರು ಮುಖ್ಯವಾಗುವುದಿಲ್ಲ. ದುಡಿಮೆ ಒಂದೇ ದೊಡ್ಡದು. ದೊಡ್ಡ ದೊಡ್ಡ ಮನೆ ಕಟ್ಟುತ್ತಾ ಒಮ್ಮೆ ಬೆರಗಿನಿಂದ ನಿಂತು ನೋಡಿ ಕೆಲಸ ಮುಂದುವರೆಸುತ್ತಾರೆ. ಅವರಿಗೆ ಅವರ ಕೆಲಸದಲ್ಲಿ ಯಾವ ತಪ್ಪುಗಳಾಗಬಾರದು ಅನ್ನುವ ಎಚ್ಚರಿಕೆಯಿದೆ. ಇಲ್ಲಿಯ ಸಿಮೆಂಟಿನ ಧೂಳು ಪಕ್ಕದ ಮನೆಯವನಿಗೆ ಏನು ತೊಂದರೆ ಕೊಡುತ್ತಿದೆ, ಯಾವ ಪರಿಸರಕ್ಕೆ ಹಾನಿಯಾಗುತ್ತಿದೆ ಅನ್ನೋದು ಅವಶ್ಯವೇ ಅಲ್ಲ.
ಇವರಿಗೆ ಹೆಸರಿಲ್ಲ ,ಹೆಸರಿಗಾಗಿ ಹೋರಾಟ ನಡೆಸಿಲ್ಲ, ಹೆಸರನ್ನು ಯಾರಾದರೂ ಕೂಗಲಿ ಅನ್ನುವ ನಡವಳಿಕೆಯೂ ಇಲ್ಲ. ಅಂತಹ ಹೆಸರಿಲ್ಲದ ಜನರಿಂದಲೇ ಊರಲ್ಲಿ ಹೆಸರಿರುವವರು ಬದುಕಿದ್ದಾರೆ.
ಹೆಸರಿಲ್ಲದ ಊರು ಈಗ “ಹೆಸರಿಲ್ಲದ ಊರು” ಎಂದು ನಾಮಾಂಕಿತವಾಗಿದೆ. ಅಲ್ಲಿ ಕೆಲಸಗಳು ಮಾತ್ರ ನಡೆಯುತ್ತದೆ…..
ಧೀರಜ್ ಬೆಳ್ಳಾರೆ