LATEST NEWS
ದಿನಕ್ಕೊಂದು ಕಥೆ- ಜಗಳ
ಜಗಳ
ಜಗಳ ಆರಂಭವಾಗಿತ್ತು. ಅವರು ಐದು ಜನ ಆತ್ಮೀಯರು. ಹಲವು ವರ್ಷಗಳ ಬಾಂಧವ್ಯ. ಬಿಟ್ಟು ನಡೆದಿಲ್ಲ ಒಂದಿನವೂ. ಮುನಿಸುಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತಿತ್ತು. ಕಲಿಕೆಯ ಹೆಜ್ಜೆಯನ್ನು ಜವಾಬ್ದಾರಿಯ ಕಡೆಗೆ ಇಟ್ಟರು. ಮಾತುಕತೆ ಅಪರೂಪವಾಯಿತು. ಬಾಂಧವ್ಯ ಗಟ್ಟಿಯಾಗಿಯೇ ಇತ್ತು.
ಆಗಾಗ ಮುಖತಃ ನೋಡಿ ಮಾತನಾಡುವುದಕ್ಕೆ ಮೊಬೈಲ್ ಬಳಸಿ ಹರಟುತ್ತಾರೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಧೈರ್ಯ ತುಂಬುತ್ತಾ, ಬೆನ್ನು ತಟ್ಟುತ್ತಾ, ಜೊತೆಯಾಗುತ್ತಾರೆ. ಇತ್ತೀಚಿಗೆ ಅಲ್ಲಿ ಒಬ್ಬರ ತಿರಸ್ಕಾರ ಆರಂಭವಾಗಿದೆ. ಅದು ಬೇಕೆಂದೇನೂ ಅಲ್ಲ. ಉಳಿದವರ ಮಾತು ಹೆಚ್ಚಾದಾಗ ಕೆಲವರು ಮೌನವಾಗಿ ಇರಬೇಕಾಗುತ್ತದೆ. ಇದಕ್ಕೆ ಅಲ್ಲೊಬ್ಬಳು ಮೌನವಾಗಿ ನೋವನ್ನು ಸಹಿಸಿದಳು. ಒಮ್ಮೆ ಅಂದುಕೊಂಡಳು……
” ಇವರು ನನ್ನ ಗೆಳೆಯರು ನನಗಾಗ್ತಿರೋ ನೋವನ್ನು ಜೋರಿನಲ್ಲಿ ಕೇಳುತ್ತೇನೆ. ನನಗೂ ಮಾತಿಗೆ ಅವಕಾಶ ಬೇಕೆಂದು ಹಠ ಹಿಡಿತೇನೆ. ಅವರಿಗೂ ತಿಳಿಯಲಿ, ನನ್ನವರಲ್ಲವಾ ಎಲ್ಲರೂ” ಹಾಗೆ ಆರಂಭವಾದದ್ದು ಸಣ್ಣ ಜಗಳ .ಇಲ್ಲಿ ಜಗಳ ಬೆಳತಾನೆ ಇಲ್ಲ . ಉಳಿದ ನಾಲ್ವರು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳ್ತಿದ್ದಾರೆ.
ಆಕೆ ಸತಾಯಿಸುತ್ತಿದ್ದಾಳೆ. ಜಗಳವು ಪ್ರೀತಿಯ ಪೂರ್ಣವಿರಾಮ ಕ್ಕೆ ಬಂದು ನಿಂತಿತ್ತು. ಕ್ಷಮಾಪಣೆಯ ಒಂದು ಸಣ್ಣ ನಾಟಕವು ಆಯ್ತು. ಇಲ್ಲಿ ಪ್ರೀತಿ ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ …. ಆತ್ಮೀಯರು ನಮ್ಮವರೇ ಆಗಿದ್ದರೆ ಗದರಿಸಿ ಕೇಳೋಣ, ನಮ್ಮೊಳಗಿನ ನೋವು ಅವರಿಗೆ ಹೇಗೆ ತಿಳಿಯುತ್ತದೆ, ಹೇಳದಿದ್ದರೆ …..ಅಲ್ವಾ ಇದು ಗೆಳೆತನದಲ್ಲಿ ಮಾತ್ರ ಸಾದ್ಯ
ಧೀರಜ್ ಬೆಳ್ಳಾರೆ