LATEST NEWS
ದಿನಕ್ಕೊಂದು ಕಥೆ- ಭಯ
ಭಯ
ಇಲ್ಲ ನನಗೆ ನನ್ನ ಭಯವನ್ನು ವ್ಯಕ್ತಪಡಿಸೋಕೆ ಆಗ್ತಾ ಇಲ್ಲ. ಅದೋಂತರಹದ ನಡುಕ. ಆಗಾಗ ಬಿಸಿನೀರನ್ನು ಕುಡಿಯುತ್ತಿದ್ದೇನೆ. ಕೈ ತೊಳೆಯುತ್ತಾ ಇದ್ದೇನೆ. ಸ್ವಲ್ಪ ಉಸಿರು ಕಟ್ಟಿದಾಗೂ ನಡುಕ. ಕನಸುಗಳೆಲ್ಲಾ ಉಳಿದುಬಿಡುತ್ತದೆಯೇನೋ?ಯಾಕೆಂದರೆ ಸುದ್ದಿಗಳು ದೂರದ ದೇಶದಲ್ಲಿತ್ತು.
ನನ್ನ ದೇಶಕ್ಕೆ ಬಂದು ಅಪರಿಚಿತವಾಗಿತ್ತು. ಈಗ ಪರಿಚಿತರಿಗೆ ಆತ್ಮೀಯರಿಗೆ ,ಒಬ್ಬೊಬ್ಬರ ಮರಣದ ಸುದ್ದಿ ನನಗೆ ಭರವಸೆಯನ್ನು ಕಡಿಮೆ ಮಾಡುತ್ತಿದೆ. ಸುದ್ದಿಯೇ ಬೇಡ ಎಂದು ನಾಲ್ಕು ಗೋಡೆಗಳ ನಡುವೆ ಕೂತಿದ್ದೇನೆ. ಆದರೆ ಹೀಗೆ ಕೂತವರ ಕೊನೆಯ ಕ್ಷಣಗಳು ಕಣ್ಣ ಮುಂದೆ ಚಿತ್ರ ಕಟ್ಟುತ್ತದೆ.ಕನಸುಗಳಲ್ಲಿ ಬರಿಯ ಮಸಣದ ಬೆಂಕಿ, ಉಸಿರುಕಟ್ಟಿದ ಒದ್ದಾಟವೇ ಕಾಣಲು ಶುರುವಾಗಿದೆ. ಪ್ರತಿಯೊಂದು ಕ್ಷಣವೂ ಕಾಲನ ಹೆಜ್ಜೆ ಸಪ್ಪಳದಂತಿದೆ.ಜೋರು ಮಳೆಯಾದಾಗ ಒಮ್ಮೆ ಭೋರ್ಗರೆದು ಎಲ್ಲವೂ ಕೊಚ್ಚಿ ಹೋಗಿ ನಿಂತಾಗ ಆಗುವ ಸಮಾಧಾನ, ಇಲ್ಲೊಮ್ಮೆ ಸಂಭವಿಸಲಿ ಅನ್ನಿಸುತ್ತದೆ.
ಮತ್ತೆ ಸಂಭ್ರಮದ ಕ್ಷಣಗಳು ಮರಳಿ ಬಂದಾಗ ಜೊತೆಗಿದ್ದ ಎಷ್ಟು ಜೀವಗಳು ಮರಳಿ ಸಿಗುತ್ತದೆಯೋ ಅನ್ನುವ ಧೈರ್ಯವಿಲ್ಲ. ಯಾವುದೋ ಶಕ್ತಿಯೊಂದು ಒಮ್ಮೆಲೆ ಬಂದು ಎಲ್ಲ ದುಷ್ಟ ಕ್ರಿಮಿಗಳನ್ನು ದೂರ ಒಯ್ದು ನೆಮ್ಮದಿಯ ಗಾಳಿಯನ್ನು ನೀಡಲಿ ಎನಿಸುತ್ತದೆ . ನಮಗೋಸ್ಕರ ಹಗಲು ರಾತ್ರಿ ದುಡಿಯುತ್ತಿರೋ ಜೀವಗಳಿಗೂ ಶಕ್ತಿ ನೀಡಲಿ. ಸಾವು ನೀ ಸುಳಿಯಬೇಡ ಯಾರ ಬಳಿ.
ಖಾಲಿಯಾದರೆ ಮಾತ್ರ ತುಂಬಿಕೊಳ್ಳಬಹುದು ಅಂತೆ.
ಇದು ಜ್ಞಾನಕ್ಕೆ ಒಪ್ಪುವ ಮಾತು. ಆದರೆ ಜೀವಕ್ಕಲ್ಲ. ನನ್ನವರು ಖಾಲಿಯಾದರೆ ಮತ್ತೆ ತುಂಬಲಾಗುವುದಿಲ್ಲ .ನಿರಾಕಾರನೇ ಉಳಿಸೋ ಎಲ್ಲರನ್ನು .ಮನ್ನಿಸೋ ಪಾಪಗಳನ್ನು. ಇಷ್ಟೇ ಇನ್ನೂ ಹೇಳುತ್ತಾ ಹೋದರೆ ಉಸಿರುಗಟ್ಟುವ ಭಯವಿದೆ. ಮತ್ತೆ ನಿಮ್ಮನ್ನು ಭೇಟಿಯಾಗುವ ಧಯೆ ನೀಡಲಿ ಭಗವಂತ ….
ಧೀರಜ್ ಬೆಳ್ಳಾರೆ