LATEST NEWS
ದಿನಕ್ಕೊಂದು ಕಥೆ- ಯಾಕೆ ಹೀಗಾಗಿದ್ದೀಯಾ

ಯಾಕೆ ಹೀಗಾಗಿದ್ದೀಯಾ
ನಾನು ಸಣ್ಣಗೆ ಮಳೆ ಹನಿಯುತ್ತಿರುವಾಗ ಒಂದು ಗ್ಲಾಸ್ ಟೀ ಹಿಡಿದು ಅದನ್ನು ಆಸ್ವಾದಿಸುತ್ತಿದ್ದವಳು. ಈಗ ಆ ಟೀ ರುಚಿಸುತ್ತಿಲ್ಲ. ಅದರೊಳಗೆ ಬೆರೆತ ಸಕ್ಕರೆ ಕರಗಿಲ್ಲವೆಂದಲ್ಲ. ನನ್ನೊಂದಿಗೆ ಸಪ್ತಪದಿ ತುಳಿದು ,ಮೂರು ಗಂಟು ಹಾಕಿದ ನನ್ನವನು ಇತ್ತೀಚಿಗೆ ಸರಿಯಾಗಿ ಬರೆಯುತ್ತಿಲ್ಲ. ಇದೇ ಕಾರಣಕ್ಕೆ ಜೀವನವೇ ರುಚಿಸುತ್ತಿಲ್ಲ.
ಪ್ರೀತಿಸಿ ಜೊತೆಯಾದವರು ನಾವು.ನನ್ನದೇ ಆಯ್ಕೆ ಹುಡುಗ .ಅಪರಂಜಿಗೆ ಒಂದು ತೂಕ ಹೆಚ್ಚಿನವನು. ನನ್ನ ಹೃದಯ ಕದ್ದ ಚೋರ. ನನ್ನ ಆಯ್ಕೆ ಬಗ್ಗೆ ವಿಪರೀತ ಸಂಭ್ರಮಪಟ್ಟಿದೆ ನಾನು. ಇತ್ತೀಚಿಗೆ ಅವನಲ್ಲಿನ ವರ್ತನೆಗಳು ನನ್ನನ್ನು ಕಂಗೆಡಿಸಿವೆ. ನಾನು ಅವನ ಆತ್ಮೀಯ ಬಳಗದವಳೇ ಆಗಿಲ್ಲ. ಇತರರೊಂದಿಗೆ ವಿಪರೀತ ಬರೆಯುತ್ತಿದ್ದಾನೆ. ಸಮಯ ಅನ್ನುವ ಉಡುಗೊರೆಯನ್ನು ನನಗೆ ಕೊಡ್ತಾನೆ ಇಲ್ಲ.

ನನ್ನೊಂದಿಗೆ ಭಾವನಾತ್ಮಕವಾಗಿ ಬರೆಯುತ್ತಿಲ್ಲ. ಊಟ ತಿಂಡಿಗಳಿಗೆ ಮಲಗೋಕೆ ಜೊತೆಯಾಗ್ತಾನೆ. ಕೂತು ಹರಟುವುದಿಲ್ಲ, ಜೊತೆಯಾಗಿ ನಡೆಯುವುದಿಲ್ಲ, ನನ್ನರಸಿ ಎಂದು ಕಣ್ಣೊಳಗೆ ನೋಡಿ ಮುದ್ದಿಸುವುದಿಲ್ಲ ,ಕೀಟಲೆ ಮಾಡುವುದಿಲ್ಲ, ತಿರುಗಾಡೋಕೆ ಬರುವುದಿಲ್ಲ .ರೇಗಾಡುತ್ತಾನೆ, ಕೂಗಾಡುತ್ತಾನೆ ,ಸಣ್ಣ ಪುಟ್ಟ ವಿಚಾರಗಳಿಗೂ.? ನನ್ನ ಅವಶ್ಯಕತೆ ಇಲ್ಲದಂತೆ ಮಾತನಾಡುತ್ತಾನೆ. ಯಾಕೆ ಹೀಗಾಗಿದ್ದಾನೆ? ಅನ್ನೋದು ತಿಳಿದಿಲ್ಲ.
ನಾನೇ ವಿಪರೀತವಾಗಿ ಯೋಚಿಸುತ್ತಿದ್ದೇನೆಯೇ?..ಅಥವಾ ಅವನ ವರ್ತನೆ ನಿಜವಾಗಿ ತಪ್ಪಾಗಿದೆಯೇ? ಹೇಳುವುದು ಯಾರಲ್ಲಿ. ಕೇಳುವ ಕಿವಿಗಳಿಗೆ ಕಾದಿದ್ದೇನೆ. ಹೇಳಿ ಆಗುವುದೇನು?. ಮನಸ್ಸು ಹಗುರ ಆಗಬಹುದಷ್ಟೇ. ಗೆಳೆಯಾ… ನನ್ನಿನಿಯಾ… ಮಾತನಾಡು.. ಮೊದಲಿನಂತಾಗೊ… ನೋವಿದ್ದರೂ ಹೇಳಿಕೋ.. ನಾನು ನಿನ್ನ ನಂಬಿ ಬಂದವಳಲ್ಲವೇ… ಮತ್ತೆ ಟೀ ರುಚಿಸಬೇಕು ಬದುಕಿನ ಜೊತೆ.
ನೀನು ಬರೆಯಬೇಕು ಸಕ್ಕರೆಯಂತೆ ನನ್ನೊಳಗೆ ….
ಧೀರಜ್ ಬೆಳ್ಳಾರೆ