LATEST NEWS
ದಿನಕ್ಕೊಂದು ಕಥೆ- ಅವಳ ಪತ್ರ

ಅವಳ ಪತ್ರ
“ಕೆಲವು ದಿನಗಳ ರಾತ್ರಿಗಳಲ್ಲಿ ಅವನ ಯೋಚನೆ ಕಾಡುತ್ತಿದೆ. ಅವನೇನು ವಿಪರೀತ ಎನಿಸುವಷ್ಟು ಆತ್ಮೀಯನಲ್ಲ. ನನಗೆ ಗೆಳೆಯನೋ, ಕುಟುಂಬದ ಬಂಧುವೋ, ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಅವನ ಸಾಮಿಪ್ಯ ಅದೊಂದು ಪುಳಕ.ಕುಳಿತು ಮಾತನಾಡಲು, ಕೈ ಹಿಡಿದು ನಡೆಯಲು ಏನೋ ರೋಮಾಂಚನ.
ದೂರವಿದ್ದಾಗ ಅವನದೇ ನೆನಪು ಆಗಾಗ ಕಾಡುತ್ತಿದೆ. ಅವನಿಗೆ ಅಂದರೆ ಈ ಸಂಬಂಧಕ್ಕೆ ಹೆಸರೇನೆಂದು ನೀಡಲಿ ತಿಳಿದಿಲ್ಲ .ಅವನಿಗೆ ನನ್ನ ಮೇಲೆ ಅಕ್ಕರೆಯಂತೆ ,ನನ್ನ ಮುದ್ದಿಸಬೇಕಂತೆ. ಜೊತೆಯಾಗೋಣವಂತೆ. ನಾನು ಹು ಅಂದುಬಿಟ್ಟರೆ ಮುಂದೇನು ?.ನನ್ನ ವಯಸ್ಸಿನ ಹಾರ್ಮೋನಿನ ಪ್ರಭಾವವಿರಬಹುದು ಅಲ್ವಾ? ಇಲ್ಲ…. ನನ್ನ ಗುರಿಯನ್ನು ತಲುಪುವ ಹಾದಿ ತುಂಬಾ ದೂರ ಇದೆ.

ನಾನು ಏರುವ ಏಣಿಗೆ ಇವನು ಅಡ್ಡಲಾಗಿಬಿಟ್ಟರೆ, ನನ್ನ ಕನಸುಗಳು ಅವನಿಗೆ ಇಷ್ಟವಾಗಿಲ್ಲವಾದರೆ,ಈಗ ಒಪ್ಪಿ ಅಮೇಲೆ ದೂರ ಸರಿಸಿದರೆ, ಆ ಸ್ಪರ್ಶದ ಸುಖಕ್ಕೆ ನನ್ನ ಗುರಿಯನ್ನು ದೂರಮಾಡಲೇ? ಇಲ್ಲ!!. ಬೇಡ ಬಾಂಧವ್ಯವನ್ನು ವೃದ್ಧಿಸಿ ಅವನೊಂದಿಗೆ ಹರಟುವುದಕ್ಕಿಂತ, ನನ್ನ ಕನಸನ್ನು ನನಸಾಗಿಸಿ ನನ್ನವರ ಮುಖದಲ್ಲಿ ನಗುವಿನ ಹೆಮ್ಮೆ ಮೂಡಿಸಿ ಮತ್ತೆ ಹಿಂತಿರುಗಿ ನೋಡುತ್ತೇನೆ.
ಕಾಯುತ್ತಿದ್ದರೆ ನನ್ನ ಮನಸ್ಸಿಗೆ ಒಪ್ಪಿಗೆ ಇದ್ದರೆ ಬದುಕು ಸಾಗಿಸಬಹುದು… ಸದ್ಯಕ್ಕೆ ಅದು ನನ್ ದಾರಿಯಲ್ಲ. ನನ್ನ ದಾರಿಯಲ್ಲಿ ಕಣ್ಮುಚ್ಚಿದರೆ ಕಾಣಬೇಕಾದ್ದು ಕನಸೆಂಬ ಸಾಧನೆಯ ಕಾಮನಬಿಲ್ಲು. ಎಲ್ಲಿ ಪರಿಶ್ರಮದ ಮಳೆಗೆ ಸಮಯದ ಬಿಸಿಲು ಬಿದ್ದಾಗ ಎಂಬ ಗುರಿಯೆಂಬ ಕಾಮನಬಿಲ್ಲು ಮಿನುಗುತ್ತದೆ. ಅದು ಕ್ಷಣದಲ್ಲಿ ಹೋಗವಂತಹುದು ಅಲ್ಲವೇ ಅಲ್ಲ”. ಇದು ಅವಳ ಪತ್ರ. ಇದನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಅವಳಿಗೆ ತಿಳಿದಿಲ್ಲ .ಅವಳ ನಿರ್ಧಾರ ನೋಡಿದರೆ ಅವಳು ಸಾಮಾನ್ಯದವಳಲ್ಲ. ಯಾರೆಂಬುದು ಗೊತ್ತಿಲ್ಲ… ಒಳಿತಾಗಲಿ ಅವಳಿಗೆ
ಧೀರಜ್ ಬೆಳ್ಳಾರೆ