LATEST NEWS
ದಿನಕ್ಕೊಂದು ಕಥೆ- ಗೊಂದಲ

ಗೊಂದಲ
“ಲೋ ಜೀವನ ಅಂದರೆ ಏರಿಳಿತಗಳು ಸಾಮಾನ್ಯ ,ನಾವು ತಲುಪುವ ದಾರಿ ಬಗ್ಗೆ ಗೊತ್ತಿರಬೇಕು .ಶ್ರದ್ಧೆಯಿಂದ ಕೆಲಸ ಮಾಡಿದರೆ ಅದೇ ನಮ್ಮನ್ನ ಹಿಡಿದೆತ್ತಿ ನಿಲ್ಲಿಸುತ್ತದೆ” ಈ ತರಹದ ನೀತಿ ಪಾಠಗಳು ಅವನಿಗೆ ಎಲ್ಲರೂ ಹೇಳುವವರೇ .ಇವನು ತನ್ನ ಮನಸ್ಸಿನೊಳಗಿನ ಕ್ಷೋಭೆಯನ್ನು ಹೊರಗೆ ಇಟ್ಟಾಗ ಅದರಲ್ಲೊಂದಿಷ್ಟು ಮೈ ಕಾಯಿಸಿ ಬೋಧನಾಪ್ರಧಾ ಮಾತುಗಳನ್ನಾಡಿ ಹೊರಟು ಹೋದರು.
ಒಂದು ತುತ್ತು ಅನ್ನ ನೀಡಿದವರಲ್ಲ. ಆ ದಿನ ಸಂಜೆ ಸಮುದ್ರ ತೀರದಲ್ಲಿ ಕುಳಿತು ತಾ ಮಾಡುತ್ತಿರುವ ಕೆಲಸ ಬದಲಾಯಿಸಬೇಕೇ ಅನ್ನೋದರ ಬಗ್ಗೆ ಯೋಚಿಸುತ್ತಾ ಕುಳಿತಿದ್ದಾ. ನಾ ಮಾಡುವ ಕೆಲಸ ಅದೇ ವೇಷಧರಿಸಿ ಮಾಲ್ಗಳ ಮುಂದೆ ಜನರನ್ನು ಸಂತಸ ಪಡಿಸುವುದು. ಕೈ ಕುಲುಕುವುದು. ಗೊಂಬೆಯ ಒಳಗೆ ನನ್ನೊಳಗೆ ನೋವಿನ ಬೆವರು ಹರಿಯುತ್ತಿರುತ್ತದೆ.

ಅದೇ ಅಂಗಡಿಗೆ ಹೋಗಿ ನಾನು ಖರೀದಿಸುವಷ್ಟು ಬೆಳೆಯೋಕೆ ಸಾಧ್ಯವಾಗ್ತಾ ಇಲ್ಲ ಅನ್ನುವ ನೋವು ನನ್ನೊಳಗೆ ಮನೆಮಾಡಿದೆ. ಇಲ್ಲಿಗೆ ಬಂದವರಲ್ಲಿ ನನ್ನ ಗೆಳೆಯರು,ಸಂಬಂಧಿಕರು ಎಲ್ಲಾ ಇದ್ರು. ನಾ ಮುಖವಾಡ ಧರಿಸಿದ್ದರಿಂದ ಪರಿಚಯ ಸಿಗಲಿಲ್ಲ. ಅವರೊಂದಿಗೆ ಪರಿಚಯ ಮಾಡುವ ಮುಖವೂ ನನ್ನದಲ್ಲ.
ನನ್ನ ಓದಿಗೆ ಬೇರೆ ಕೆಲಸ ಸಿಗದೆ ಈ ದುಡಿಮೆಗೆ ಇಳಿದಿದ್ದೇನೆ. ರಾತ್ರಿಯಾದರೆ ಪೆಟ್ರೋಲ್ಪಂಪ್ ಅಲ್ಲಿರುತ್ತೇನೆ. ಒಂದಿನವೂ ಬೇಡಿ ತಿಂದಿಲ್ಲ. ಇಲ್ಲಿಂದ ಇನ್ನೂ ಎತ್ತರಕ್ಕೆ ಏರಬೇಕು, ನನ್ನ ಕೈ ಹಿಡಿಯೋಳನ್ನ ನಾನು ಸಾಕಬೇಕಲ್ಲಾ. ಅದು ಹೇಗೆ ಅನ್ನೋದು ಗೊತ್ತಾಗ್ತಾ ಇಲ್ಲ. ನನ್ನ ಜೀವನ ತುಂಬಾ ಗೊಂದಲದಲ್ಲಿದೆ ಈ ಸಮುದ್ರದ ಹಾಗೆ. ಅಲೆಗಳು ಹತ್ತಿರ ಬಂದರೂ ದಡ ಅದನ್ನು ದೂರ ತಳ್ಳುತ್ತಿದೆಯೋ?, ಅಥವಾ ದಡ ಅಪ್ಪಿಕೊಳ್ಳ ಬೇಕೆಂದಾಗಲೆಲ್ಲಾ ಅಲೆಗಳು ಕೈಗೆ ಸಿಗುತ್ತಿಲ್ಲವೋ? ಗೊತ್ತಾಗುತ್ತಿಲ್ಲ .ಹಾಗಾಗಿದೆ ನನ್ನ ಸ್ಥಿತಿ .
ಕೂತು ಯೋಚಿಸೋಕೂ ಸಮಯ ಇಲ್ಲ. ಸಾಗಿದ ಕಡೆಗೆ ಹೋಗಲೋ, ನಾನೆಂದ ಕಡೆಗೆ ಸಾಗಿಸಲೋ ಬದುಕೇ ಉತ್ತರಿಸಬೇಕು .ಅಷ್ಟೇ .
“ಹಲೋ ಸರ್ ಎರಡು ನಿಮಿಷ ಪೆಟ್ರೋಲ್ ಪಂಪ್ ಬಳಿ ಬಂದಿರುತ್ತೇನೆ ”
ಧೀರಜ್ ಬೆಳ್ಳಾರೆ