LATEST NEWS
ದಿನಕ್ಕೊಂದು ಕಥೆ- ಪ್ರೇಮ ಕತೆ
ಪ್ರೇಮ ಕತೆ
ಪ್ರೇಮ ಕಥೆಗಳು ನಮ್ಮನ್ನು ಒಮ್ಮೆ ಓದುವಂತೆ ಪ್ರೇರೆಪಿಸುತ್ತದೆ. ಹಾಗಾಗಿ ಇಂದಿನ ಕಥೆಯಲ್ಲಿ ನೂತನ ಪ್ರೇಮಕಥೆಯೊಂದನ್ನು ನಿಮ್ಮ ಮುಂದಿಡುತ್ತೇನೆ. ನಮ್ಮಪ್ಪನಿಗೆ ಕೋಳಿ ಅಂಕದ ಹುಚ್ಚು ತುಸು ಹೆಚ್ಚೇ ಇದೆ. ಇದು ಅಪ್ಪನ ಪ್ರೇಮಕಥೆಯಲ್ಲ. ಅವರು ಸಾಕುತ್ತಿರುವ ನಮ್ಮನೆ ಕೋಳಿಯದು.
ಮನೆಯಲ್ಲಿ ಮರಿಯಾಗಿದ್ದನಿಂದ ಅಪ್ಪ ಸಾಕಿದ್ದು ಇದೇ ಕೋಳಿಯನ್ನು. ಇದು ಸಣ್ಣವನಿಂದಲೇ ಇಲ್ಲಿರುವ ಕೋಳಿ ಆದ್ದರಿಂದ ಹಲವಾರು ಹೇಂಟೆಗಳ(ಹೆಣ್ಣು ಕೋಳಿ) ಪರಿಚಯ ಇದೆ.ಅದರಲ್ಲಿ ನಮ್ಮ ಕೆಳಗಿನ ಮನೆಯ ರಜನಿ ಅಕ್ಕನ ಹೇಂಟೆಯ ಮೇಲೆ ವಿಪರೀತ ಮೋಹ. ಮೊದಲು ಅದನ್ನು ಪಡೆಯೋಕೆ ನಮ್ಮ ಕೋಳಿ ಪಟ್ಟ ಹರಸಾಹಸ ತುಂಬಾ ದೊಡ್ಡದು.
ಅದಕ್ಕೆ ಪ್ರತಿಸ್ಪರ್ಧಿಗಳಾದ ಇನ್ನೊಂದೆರಡು ಹುಂಜಗಳನ್ನು ಹೊಡೆದುರುಳಿಸಿತ್ತು. ತನ್ನ ಗೆಳತಿಗೆ ಪ್ರತಿದಿನ ಕಾಳು ಕದ್ದು ತಂದು ಕೊಡುವುದು ,ಅದನ್ನು ಜತನದಿಂದ ಕಾಯುವುದು, ಅದರ ಮುಂದೆ ತನ್ನ ಅಂಗಸೌಷ್ಠವವನ್ನು ಪ್ರದರ್ಶಿಸೋದು, ನೃತ್ಯ ಮಾಡಿ ಮೋಡಿ ಮಾಡುವುದು .ಪ್ರೇಮ ಪತ್ರ ಒಂದನ್ನು ನೀಡಲಿಲ್ಲ ಅಂತ ಕಾಣುತ್ತೆ.
ಯಾವ ದಿನ ಪ್ರೇಮ ನಿವೇದನೆಯಾಗಿ ಒಪ್ಪಿಗೆ ಸಿಕ್ಕಿತೋ ಗೊತ್ತಿಲ್ಲ .ಮನೆಯಲ್ಲಿ ಬೆಳಗ್ಗೆ ಕಾಳು ತಿಂದು ಅಪ್ಪ ಇಲ್ಲದ ಸಮಯ ನೋಡಿ ಅದನ್ನು ಇಲ್ಲಿಗೆ ಕರೆಸಿಕೊಂಡು ಅದಕ್ಕೆ ತಿನ್ನೋಕೆ ಬಿಟ್ಟು ಅದನ್ನು ನೋಡುತ್ತಾ ಕೂರುವುದು. ಅಮೇಲೆ ಇಬ್ಬರೂ ಕೂಡಿ ಗುಡ್ಡದ ಕಡೆಗೆ ಹೊರಟು ಅಲ್ಲಿ ತರಗೆಲೆಗಳ ನಡುವೆ ಇರುವ ಹುಳ ಹುಪ್ಪಟೆಗಳನ್ನು ಆಯ್ದುಕೊಳ್ಳುತ್ತಾ, ಪೋಲಿ ಆಟಗಳನ್ನಾಡುತ್ತಾ ಸಂಜೆವರೆಗೂ ಅಲ್ಲಿ ತಿರುಗಾಡಿ ಗೆಳತಿಯನ್ನು ಮನೆಯವರೆಗೂ ಬಿಟ್ಟು ಇದು ಗೂಡು ಸೇರಿಕೊಳ್ಳುತ್ತೆ. .
ನಮ್ಮನೆ ಕೋಳಿ ಅಂಕಕ್ಕೆ ಹೋದ ಮರುದಿನ ತನ್ನ ಗಾಯಗಳನ್ನು ತನ್ನ ಗೆಳತಿಗೆ ಪರಾಕ್ರಮದಿಂದ ತೋರಿಸುತ್ತಿತ್ತು. ಒಂದು ದಿನ ಏನು ನಡೆಯಿತೋ ಗೊತ್ತಿಲ್ಲ.ತನ್ನ ಗೆಳತಿ ರಜನಿ ಅಕ್ಕನ ಮನೆ ಕೋಳಿ ಕಾಣಿಸಲಿಲ್ಲ. ನಮ್ಮ ಮನೆಯ ಕೋಳಿಗೆ ಜೀವನ ವೈರಾಗ್ಯ ಬಂತು. ಅಲ್ಲೇ ಮೂಲೆಗೆ ಒರಗಿತು. ದಿನವು ಕಾಯುತ್ತಿತ್ತು. ಆಗಲೇ ಹೊಸತೊಂದು ಹೇಂಟೆ ನಮ್ಮ ಹುಂಜನನ್ನು ಹುಡುಕಿಕೊಂಡು ಬಂದು ಬಿಂಕಾಣ ಪ್ರದರ್ಶಿಸಿದರು ಇದು ಯಾವುದಕ್ಕೂ ಮರಳಾಗದೇ ಅವಳಿಗಾಗಿಯೇ ಕಾಯುತ್ತಿತ್ತು. ಅಂಕದಲ್ಲಿ ಮತ್ತೆ ಗೆದ್ದರೂ ಅದನ್ನು ತೋರಿಸಿ ಕೊಳ್ಳೋಕೆ ಗೆಳತಿ ಇಲ್ಲ ಅನ್ನುವ ವೇದನೆ ಕಾಡುತ್ತಿದೆ. ಈಗಲೂ ಕೂಡ ಕಾಯುತ್ತಿದೆ.
ಇದು ನಾನು ಕಂಡದನ್ನ ಪದಗಳ ರೂಪಕ್ಕೆ ಇಳಿಸಿದ್ದೇನೆ.ಮುಂದೊಂದಿನ ಕೋಳಿ ಏನಾದರೂ ಬಂದು ಕಥೆ ಹೀಗಲ್ಲ ಅಂತ ಹೇಳಿದರೆ ಅದನ್ನೇ ಬರಿತೇನೆ ಸರೀನಾ?..
ಕನ್ನಡ ಇಂಗ್ಲಿಷ್ ಹಿಂದಿ
ಧೀರಜ್ ಬೆಳ್ಳಾರೆ