LATEST NEWS
ದಿನಕ್ಕೊಂದು ಕಥೆ- ಪಾಠ
ನಮ್ಮ ಮನೆ ರಸ್ತೆಬದಿಯಲ್ಲಿ ಇರುವುದು .ಅಲ್ಲಲ್ಲಾ ರಸ್ತೆಪಕ್ಕ ನಮ್ಮ ಮನೆ ಇರೋದು. ಇದರಲ್ಲಿ ಸತ್ಯ ಯಾವುದು? ನಾವು ಮನೆ ಕಟ್ಟುವಾಗ ರಸ್ತೆ ಇಷ್ಟು ಅಗಲವಾಗಿಯೂ ಇರಲಿಲ್ಲ ಆಮೇಲೆ ಡಾಮರೀಕರಣ ಆದದ್ದು. ಹಾಗಾಗಿ ನಮ್ಮ ಮನೆ ಪಕ್ಕ ರಸ್ತೆ ಇರುವುದು ಸರಿ.
ವಿಷಯ ಏನೆಂದರೆ ನಮ್ಮ ಮನೆ ಎದುರಿನ ರಸ್ತೆ ದಾಟಿದರೆ ಖಾಲಿ ಜಾಗ . ಆಗಾಗ ಅಲ್ಲಿ ಸಣ್ಣ ಟೆಂಟುಗಳು ನಿಂತಿರುತ್ತದೆ . ಕೆಲವು ತಿಂಗಳ ನಂತರ ಮಾಯವಾಗುತ್ತದೆ. ಈ ರಸ್ತೆ ಕೆಲಸ, ಗುಂಡಿ ಅಗಿಯೋ ಬೇರೆ ಊರಿನ ಅರೆ-ಅಲೆಮಾರಿ ಜನರು ಇಲ್ಲಿ ಬಂದು ತಾತ್ಕಾಲಿಕ ಮನೆಯನ್ನು ಕಟ್ಟಿಕೊಳ್ಳುತ್ತಾರೆ.ಆದರೆ ಈಗ ನಮ್ಮನೆ ಮುಂದೆ ಇರೋ ಈ ಮನೆ ಒಂದು ವರ್ಷದಿಂದ ಅಲ್ಲೇ ಇದೆ. ನಾಲ್ಕು ಮೂಲೆಗೂ ಕಂಬವನ್ನು ಬಿಗಿದು ಅದಕ್ಕೆ ಟಾರ್ಪಾಲನ್ನು ಹೊದೆಸಿ ಅದರೊಳಗೆ ದಿನ ದೂಡುತ್ತಿದ್ದಾರೆ.
ಅವತ್ತು ಮಳೆಯ ದಿನ. ಮಳೆ ತನ್ನೆಲ್ಲ ಪೌರುಷವನ್ನು ತೋರಿಸಲಾರಂಭಿಸಿತು. ಗಾಳಿಯು ವೇಗ ಪಡೆದುಕೊಂಡು ಬೀಸುವಿಕೆಗೆ ಕಂಬಗಳು ಕಿತ್ತುಹೋಗಿ ಟಾರ್ಪಾಲು ಹಾರಲಾರಂಭಿಸಿತು. ಗಂಡ-ಹೆಂಡತಿ ಇಬ್ಬರೂ ಅದನ್ನ ಹಿಡಿದುಕೊಳ್ಳಲು ಹರಸಾಹಸ ಪಡುತ್ತಿದ್ದರು. ಮನೆಯಂತಹ ಗುಡಿಸಲಿನಲ್ಲಿರುವ ವಸ್ತುಗಳನ್ನೆಲ್ಲ ಗಾಳಿ ತನ್ನ ಮನೆಗೆ ಕೊಂಡೊಯ್ಯುತ್ತಿತ್ತು. ನೀರು ಅವರ ಮನೆಗೆ ಭೇಟಿ ನೀಡಿತ್ತು. ವಸ್ತುಗಳು ಹರಿದಿದ್ದವು ನೀರ ಜೊತೆ.
ಅವರು ಅಳುತ್ತಿಲ್ಲ ಮತ್ತೆ ಬಿಗಿಯಾಗಿ ಕಂಬದ ಜೊತೆ ಟಾರ್ಪಾಲು ಹಿಡಿದುಕೊಂಡಿದ್ದಾರೆ. ಮಳೆಯೇ ಸೋತು ಹಿಂದೆ ಸರಿಯಿತು. ಹನಿಗಳು ಸುದ್ದಿಯೇನು ಅನ್ನೋದನ್ನ ತಿಳಿಸಲು ಅಲ್ಲೇ ಓಡಾಡುತ್ತಿದ್ದವು. ಮತ್ತೆ ಹಗ್ಗ ತಂದು ಟಾರ್ಪಾಲು ಬಿಗಿಗೊಳಿಸಿ ನೀರು ಹೊರಹಾಕಿ ಬಟ್ಟೆಗಳನ್ನು ಹಿಂಡಿ ಸಿಕ್ಕಿರುವುದನ್ನು ಹಾಸಿ ಮಲಗಿದರು. ಅಬ್ಬಾ ಅವರನಬದೈರ್ಯವೇ.
ಬದುಕಿಗೆ ಸೋತು ಹಿಮ್ಮೆಟ್ಟಲಿಲ್ಲ. ಭಗವಂತನಲ್ಲಿ ಯಾವುದಕ್ಕೂ ಬೇಡಲಿಲ್ಲ. ಭಗವಂತನಿಗೇ ತಾನು ಇವರಿಗೆ ಕೊಟ್ಟಿರುವ ಸಾಮರ್ಥ್ಯದ ಮೇಲೆ ಹೆಮ್ಮೆ ಎನಿಸಿರಬೇಕು.ಬಬದುಕು ಸಾಗುತ್ತಿದೆ. ಜೀವನ ಪಾಠವೊಂದನ್ನು ರಸ್ತೆ ಮುಂದಿನ ಜಾಗ ಕಲಿಸಿತ್ತು. ಸಿಕ್ಕಿದಾಗ ಕಲೀಬೇಕು ತಾನೇ…
ಧೀರಜ್ ಬೆಳ್ಳಾರೆ