LATEST NEWS
ದಿನಕ್ಕೊಂದು ಕಥೆ- ಮರೆತ ಹಾದಿ

ಮರೆತ ಹಾದಿ
ನೆಲ ಮತ್ತು ಪಾದಗಳು ಒಂದನ್ನೊಂದು ಅರ್ಥೈಸಿಕೊಂಡಿದೆ ಅನ್ನಿಸುತ್ತದೆ. ಪಾದ ನೋಯಬಾರದೆಂದು ಹುಲ್ಲು ಬೆಳೆಯಲಿಲ್ಲವೂ, ಅಥವಾ ಹುಲ್ಲನ್ನು ತುಳಿದೆ ಪಾದ ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ದಾರಿಯಾಗಿತ್ತು .ದಿನವೂ ನಡೆದದ್ದರಿಂದ ಅದೊಂದು ಗುರಿಯ ಕಡೆಗೆ ಸಾಗಿತ್ತು.
ಅದೇ ಹಾದಿಯ ಹಿಡಿದು ಸಾಗಿದರೆ ನೀವು ತಲುಪಬಹುದು ನಮ್ಮ ಮನೆಗೆ. ಮಾತಿನಿಂದ ತುಂಬಿದ್ದ ಮನೆ ಮೌನವಾಗಿದೆ. ಅಲ್ಲಿ ಹಲವು ಮಾತುಗಳು ಹುಟ್ಟಿಕೊಂಡಿದೆ.ಸಂತಸದಿ ನಲಿದಾಡಿದ್ದ ನನ್ನ ಮನೆಯವರು ಬೇಸರದಿ ಬೆನ್ನು ಗೋಡೆಗೆ ಒರಗಿಸಿದ್ದಾರೆ. ಘೋಷಣೆಯಾಗಿತ್ತು ಅಂದು ಅಡ್ಡಾಡಬೇಡಿ, ಮನೆಯೊಳಗಿರಿ, ಭದ್ರವಾಗಿರಿ, ಉಳಿಸಿಕೊಳ್ಳಿ.

ನಾನು ಅದನ್ನು ನಂಬಲಿಲ್ಲ .ಮಕ್ಕಳಂದರೂ ಕೇಳದೆ ಹೊರನಡೆದಿದ್ದೆ. ಆ ದಿನ ರಾತ್ರಿ ಉಸಿರು ನನ್ನ ಮಾತು ಕೇಳುತ್ತಿಲ್ಲ. ನನ್ನೊಳಗೆ ಯಾವುದು ಜಗಳ ಉಂಟಾಗಿ ನನ್ನನ್ನ ಬಿಟ್ಟು ಹೊರನಡೆಯಲು ಉಸಿರು ಕಾಯುತ್ತಿತ್ತು. ಹಿಂದೆ ಮಾಡಿದ ನನ್ನ ಹುಚ್ಚಾಟಗಳು ಕಣ್ಣಮುಂದೆ ಹಾದು ಕತ್ತಲಾಯಿತು.
ಸರತಿಸಾಲಿನಲ್ಲಿ ನಿಲ್ಲಬೇಕಾಯಿತು. ಮನೆಯವರಿಗೆ ಕೈಯಲ್ಲಿ ಬೂದಿ ಮಾತ್ರ ಸ್ಪರ್ಶಿಸುವ ಭಾಗ್ಯ ಸಿಕ್ಕಿತು. ಸಂತೈಸುವ ಮನಸ್ಸಾದರೂ ನನಗೆ ಕೈಯಿಲ್ಲ ,ಮಾತಿಗೆ ಸ್ವರವಿಲ್ಲ . ನನ್ನ ಅಜಾಗರೂಕತೆ ನನ್ನ ಮನೆಯನ್ನು ಕಷ್ಟಕ್ಕೆ ನೂಕಿದೆ.
ನನ್ನ ಮನೆಯ ಹಾದಿ ನನ್ನನ್ನ ಕಾಯುತ್ತಿದೆ .ನಾನು ಬೇರೆ ಹಾದಿ ಹಿಡಿದಿದ್ದೇನೆ.
ನಿಮ್ಮ ಹಾದಿ ನಿಮ್ಮ ಮನೆಗಿರಲಿ. ಮಾತು ಮನಸ್ಸಿನಲ್ಲಿರಲಿ …..
ಧೀರಜ್ ಬೆಳ್ಳಾರೆ