Connect with us

LATEST NEWS

ದಿನಕ್ಕೊಂದು ಕಥೆ- ಕನ್ನಡಿಯೊಳಗೆ

ಕನ್ನಡಿಯೊಳಗೆ

ಒಣಗಿದ ಗೋಡೆ ಮಳೆ ಬಿದ್ದ ಕಾರಣ ಹಸಿಯಾಗಿದೆ. ಗೋಡೆಗಳಿಗೆ ಒಂದಷ್ಟು ಮೊಳೆಗಳನ್ನು ಜಡಿದು ಕನ್ನಡಿಗಳನ್ನು ನೇತುಹಾಕಿದ್ದಾರೆ. ಇಲ್ಲೊಂದು ವಿಶೇಷವಿದೆ. ಕನ್ನಡಿ ತನ್ನ ಎದುರು ನಿಂತವರ ಬಿಂಬವನ್ನು ಕಾಣಿಸಬೇಕು. ಆದರೆ ಇಲ್ಲಿ ಪ್ರತಿಬಿಂಬ ಕಾಣದೆ ಕನ್ನಡಿಯೊಳಗಿನ ಹೊಸಲೋಕ ತೆರೆದು ನಿಂತಿದೆ.

ಒಂದಷ್ಟು ವಿದ್ಯಮಾನಗಳು ನಡೆಯುತ್ತಿದ್ದಾವೆ. ಇದರಲ್ಲೊಂದು ಕನ್ನಡಿ ಖರೀದಿಸಬೇಕು. ಆದರೆ ಅದು ನಿಜದ ಸ್ಥಿತಿಯಾಗಿರಬೇಕು. ಯಾವುದನ್ನು ಒಪ್ಪಿ ಕೈಹಿಡಿಯಲಿ. ನಾಲ್ಕು ಚೌಕಟ್ಟಿನೊಳಗೆ ಒಂದು ಕಡೆ ” ಕಂಬನಿ ಮಿಡಿಯುವ ಒಂದಷ್ಟು ಜೀವಗಳಿದ್ದಾವೆ, ಮಸಣದ ಮುಂದೆ ಸರತಿ ಸಾಲುಗಳು ಬೆಳೆದಿವೆ, ಸಾವು ಭಯಾನಕವಾಗಿದೆ, ದೂರದಲ್ಲಿ ನಿಂತು ಹತ್ತಿರವಾದವರು ಕಳೆದುಕೊಂಡವರನ್ನ ನೆನೆದು ಅಳುತ್ತಿದ್ದಾರೆ.ರೋಗ ಭಯಂಕರವಾಗಿದೆ ಎನ್ನುತ್ತಿದ್ದಾರೆ.

ಆದರೆ ಅದರ ಕೆಳಗಿರುವ ಕನ್ನಡಿಯಲ್ಲಿ ,ಅಲ್ಲಲ್ಲಿ ಚುನಾವಣಾ ಪ್ರಚಾರಗಳು ನಡಿತಾ ಇದ್ದಾವೆ, ನಗು ,ಸಂಭ್ರಮ, ಹಾಸ್ಯ ಅಬ್ಬರ ಮುಂದುವರೆಯುತ್ತಿದೆ .ಸಣ್ಣ ಕನ್ನಡಿಯೊಂದು ,ಈ ರೋಗ ಅನ್ನೋದು ಏನೂ ಇಲ್ಲ, ದುಡ್ಡು ಮಾಡುವ ದಂಧೆ ಎಂದು ಜೋರು ಬೊಬ್ಬೆ ಹೊಡೆಯುತ್ತಿದ್ದಾರೆ. ಮುರಿದ ಕನ್ನಡಿಯೊಳಗೆ, ಬಡವರನ್ನ ಹೊಡೆದು ನೋವು, ಹಿಂಸೆ ನೀಡುವ ಪಂಗಡ ಒಂದು ಕಡೆ, ಧನಿಕ ಸಂಭ್ರಮವನ್ನು ಪಡುತ್ತಿದ್ದಾನೆ.

ಕಾನೂನು ಬಡವನಿಗೆ ಮಾತ್ರ ಸೀಮಿತವಾಗಿದೆ. ಭಯ ಹೆಚ್ಚಿಸುವ ಭಾಷಣಗಳನ್ನು ತೋರಿಸುವ ಕನ್ನಡಿಗಳು, ಧೈರ್ಯ ತುಂಬುವ ಕೆಲವೊಂದಷ್ಟು ಮಾತುಗಳು, ನಿಜದ ಹಲವು ತುಣುಕುಗಳನ್ನು ಸುಳ್ಳಿನ ಕಂತೆಗಳು ಮುಚ್ಚಿ ಹಾಕುತ್ತಿವೆ. ನಿಯಮಗಳು ಕೋಟಿ ತುಂಬಿಸುವ ಪುಸ್ತಕದ ಒಳಗೆ ಮರೆಯಾಗುತ್ತಿದ್ದಾವೆ. ಇದೆಲ್ಲಾ ಕನ್ನಡಿಗಳು ಬಿಂಬಿಸುತ್ತಿರುವ ದೃಶ್ಯಗಳು.

ಬದುಕನ್ನು ಮುಷ್ಟಿಯೊಳಗೆ ತೆರೆದಿಟ್ಟರೆ ಹಾರಿ ಹೋಗುವುದು ,ಮಡಿಚಿದರೆ ಬಂಧನವಾಗುವುದು, ಬಿಗಿಗೊಳಿಸಿದರೆ ಸಾವು. ಯಾವುದನ್ನ ಆರಿಸಲಿ. ಮೂಗಿನ ತುದಿಯಿಂದ ಬಾಯಿಯವರಿಗೆ ಮಾಸ್ಕು ಏರಿಸಿ ಚಿಂತಿಸುವುದನ್ನು ಬಿಟ್ಟು ಇನ್ನೇನು ಮಾಡಲಿ……. ಕನ್ನಡಿಯೊಂದನ್ನ ಆಯ್ಕೆ ಮಾಡಿ

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *